ಧಾರವಾಡ: ದೇಶ ಸ್ವತಂತ್ರವಾಗಿ 75 ವರ್ಷಗಳ ನಂತರ ರಾಜಧಾನಿ ನವದೆಹಲಿಯಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾಗಿದೆ. ಇದು ಇಡೀ ದೇಶವೇ ಹೆಮ್ಮೆ ಪಡುವ ಸಂಗತಿ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ "ಅಹಂ ಅದಂಡಹ್ಯ" ಎನ್ನುತ್ತಿದ್ದ. ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎನ್ನುತ್ತಿದ್ದ ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದ. ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು. ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು. ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು. ಅಂತಹ ಒಂದು ಧರ್ಮ ದಂಡ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ. ಇದು ಶುಭ ಸಂಕೇತ ಎಂದರು.
ಕಾಶಿ ಪೀಠ ಮಾತ್ರವಲ್ಲ, ಇಡೀ ವಿಶ್ವವೇ ಹೆಮ್ಮೆ ಪಡುವ ನಾಯಕ ಮೋದಿ. ಈಗಾಗಲೇ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಶಿ ವಿಶ್ವನಾಥ ಮಂದಿರ, ಮಹಾಕಾಳೇಶ್ವರ ಮಂದಿರ ಜೀರ್ಣೋದ್ಧಾರ ಆಗಿದೆ. ಅಯೋಧ್ಯೆ ರಾಮಮಂದಿರ ಜೀರ್ಣೋದ್ಧಾರ ಆಗುತ್ತಿದೆ. ಇದೆಲ್ಲವೂ ದೇಶದ ಹಿತದೃಷ್ಟಿಯಿಂದ ಆಗುತ್ತಿವೆ. ನಮ್ಮ ಸಂಸದೀಯ ಕ್ಷೇತ್ರದಿಂದ ಚುನಾಯಿತರಾದವರು ಮೋದಿ. ನಮ್ಮ ಗುರುಕುಲದ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಸಿದ್ಧಾಂತ ಶಿಖಾಮಣಿ ಬಿಡುಗಡೆ ಮಾಡಿದ್ದರು. ಸನಾತನ ವೀರಶೈವ ಧರ್ಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಶ್ರೀಗಳು ತಿಳಿಸಿದರು.
ಡಾ.ರಾಮನಗೌಡರ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾತನಾಡಿ, ಡಾ.ರಾಮನಗೌಡರನ್ನು 90ನೇ ಇಸ್ವಿಯಿಂದ ನೋಡುತ್ತಿದ್ದೇವೆ. ನಾವು ಕಾಶಿಪೀಠಕ್ಕೆ ಜಗದ್ಗುರು ಆದಾಗಿನಿಂದ ಧಾರವಾಡ ಪರಿಸರದಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿಯೂ ಬಹಳ ದೊಡ್ಡ ಧರ್ಮಕ್ಕೆ ಮಾಡಿರುವ ಶ್ರೇಷ್ಠ ವೈದ್ಯರು. ಕೇವಲ ವೈದ್ಯಕೀಯ ಉಪಚಾರ ಮಾಡುವುದಷ್ಟೇ ಅಲ್ಲ, ಜನರಿಗೆ ಧರ್ಮ ಸಂಸ್ಕಾರ ಕೊಡಬೇಕು. ಧಾರವಾಡ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಜಗದ್ಗುರು, ಶಿವಾಚಾರ್ಯರನ್ನು ಕರೆದುಕೊಂಡು ಪಾದಯಾತ್ರೆ ಮಾಡಿ ಮನೆ ಮನೆಗೆ ಸಂಚರಿಸಿ ಎಲ್ಲರಿಗೂ ದೀಕ್ಷೆ ಸಂಸ್ಕಾರ ಕೊಡುವ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ಆಧಾತ್ಮಿಕತೆಯ ಸೆಳೆತದಿಂದ ಸಾಹಿತ್ಯದಲ್ಲಿ ಮೂರು ಗ್ರಂಥಗಳನ್ನು ಬರೆದಿದ್ದಾರೆ. ಉತ್ತಮ ಗ್ರಂಥಗಳನ್ನು ಬರೆಯುವುದರೊಂದಿಗೆ ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಡಾ.ರಾಮನಗೌಡರು ಎಲ್ಲ ವೈದ್ಯರ ಪ್ರೇರಣಾ ಶಕ್ತಿ ಆಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂಓದಿ:ಹೊಸ ಸಂಸತ್ ಭವನ ನವ ಭಾರತದ ಭರವಸೆಯ ಪ್ರತಿಬಿಂಬ: ಪ್ರಧಾನಿ ಮೋದಿ