ಧಾರವಾಡ : ಯೋಗೇಶ್ ಗೌಡ ಕೊಲೆ ಪ್ರಕರಣ ಆರೋಪದಡಿ ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಹಾಲಿ ಶಾಸಕ ಅಮೃತ್ ದೇಸಾಯಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ವಿನಯ್ ಪರ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಕುಟುಂಬಸ್ಥರು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಜೊತೆಗೆ ಕೆಪಿಸಿಸಿ ವಕ್ತಾರ ನಿಖೇತ್ ರಾಜ್ ಮೌರ್ಯ ಕೂಡ ವಿನಯ್ ಪರ ಎರಡು ದಿನ ಭರ್ಜರಿ ಪ್ರಚಾರ ನಡೆಸಿದ್ದರು.
ಇನ್ನು, ಕೊಲೆ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಪ್ರವೇಶಿಸಲು ವಿನಯ್ ಕುಲಕರ್ಣಿಗೆ ಕೋರ್ಟ್ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹೊರಗಿದ್ದುಕೊಂಡೇ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸ್ಪರ್ಧಿಸಿದ್ದರು. ಅಂತೆಯೇ ವಿನಯ್ ಪರವಾಗಿ ಅವರ ಪತ್ನಿ ಮತ್ತು ಮಕ್ಕಳು ಪ್ರಚಾರ ನಡೆಸಿದ್ದರು.
ಧಾರವಾಡ ಗಡಿಯಾಚೆ ಕುಳಿತು ವಿನಯ್ ರಣತಂತ್ರ : ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಯ ಗಡಿಯಾಚೆ ಮತದಾರರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸಿದ್ದು, ಕ್ಷೇತ್ರದ ಹೊರಗಿದ್ದುಕೊಂಡೇ ಪ್ರಚಾರ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರು.
ಇದನ್ನೂ ಓದಿ : ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಣ ಸವದಿ ಜಯಭೇರಿ.. ಜಾರಕಿಹೊಳಿಗೆ ಮುಖಭಂಗ