ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ಆರೋಪಿಗಳ ಅರ್ಜಿ ವಜಾಗೊಂಡಿದ್ದು, ಆರೋಪಿಗಳಿಗೆ ಇದೀಗ ಜೈಲು ಫಿಕ್ಸ್ ಆಗಿದೆ.
ನಗರದ ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಸದ್ಯ ಹಿಂಡಲಗ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ಪ್ರಯತ್ನ ನಡೆಸಿದ್ದರು. ಹುಬ್ಬಳ್ಳಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಾಲ್ಕು ದಿನಗಳ ಹಿಂದೆ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಸರ್ಕಾರಿ ವಕೀಲರು ಮತ್ತು ಆರೋಪಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಜಾಮೀನು ಕುರಿತ ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.
ಇದೀಗ ಕೋರ್ಟ್ನಿಂದ ಆದೇಶ ಹೊರಬಿದ್ದಿದ್ದು, ಅವರ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಜಾಗೊಳಿಸಿ ಕೋರ್ಟ್ ಆದೇಶ ಹೊರಹಾಕಿದೆ. ಫೆಬ್ರವರಿ 15ರಂದು ಕೆಎಲ್ಇ ಕಾಲೇಜಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಮೈತ್ರೇಯಿ ಕೃಷ್ಣನ್ ನೇತೃತ್ವದ ಹತ್ತು ಜನ ವಕೀಲರ ತಂಡದಿಂದ ವಾದ ಮಂಡನೆ ಮಾಡಿದ್ದು, ಬೆಂಗಳೂರಿನ ವಕೀಲರ ತಂಡವು ಹಲವು ಪ್ರಕರಣಗಳ ಉದಾಹರಣೆ ಮೂಲಕ ವಾದ ಮಂಡಿಸಿದ್ದರು.
ವಾದ-ವಿವಾದ ಆಲಿಸಿದ 5ನೇ ಜೆಎಂಎಫ್ಸಿ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ್ ಇಂದಿಗೆ ತೀರ್ಪು ಕಾಯ್ದಿರಿಸಿ ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಎಲ್ಲ ರೀತಿಯ ಪರಿಶೀಲನೆ ನಡೆಸಿದ ನ್ಯಾಯಾಧೀಶ ಕೆ.ಗಂಗಾಧರ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದಾರೆ.