ಧಾರವಾಡ: ತೆಲಂಗಾಣದ ಹೈದರಾಬಾದ್ನಲ್ಲಿರುವ ಜಿಲ್ಲೆಯ ಪತ್ರಕರ್ತನೊಬ್ಬನಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಲಾಕ್ಡೌನ್ ಹಿನ್ನೆಲೆ ತಮ್ಮ ಊರಿಗೆ ಬರಲಾಗದೇ ಅವರು ನರಳುತ್ತಿದ್ದಾರೆ. ತನ್ನ ಜೀವ ಉಳಿಸಿ ಎಂದು ಕರ್ನಾಟಕ ಸರ್ಕಾರ ಮತ್ತು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ರಾಜೇಸಾಬ ಅನ್ಸಾರಿ ಹೈದ್ರಾಬಾದ್ನ ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತೀವ್ರ ಹೃದಯದ ಸಮಸ್ಯೆ ಹಾಗೂ ಮೂಲವ್ಯಾಧಿಯಿಂದ ಬಳಲುತ್ತಿರುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಹೈದರಾಬಾದ್ನ ಮಹಾತ್ಮ ಗಾಂಧಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಆದ್ರೆ ಈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರೋಗಿಗಳೇ ಹೆಚ್ಚಿದ್ದಾರೆ. ಹಾಗಾಗಿ ಅಲ್ಲಿನ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡಬೇಕೆಂದು ರಾಜೇಸಾಬ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.