ಧಾರವಾಡ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ನೋಡೋಣ ಏನಾಗುತ್ತದೆ ಅಂತಾ ಯಾವ ರೀತಿ ಹೊಸ ಪಕ್ಷದಿಂದ ಪರಿಣಾಮ ಆಗಬಹುದು ನೋಡುತ್ತೇವೆ, ಪಕ್ಷದ ನಾಯಕರ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ.
ಮುಂದೆ, ಈ ಹಿಂದೆ ಯಡಿಯೂರಪ್ಪನವರು ಕೆಜೆಪಿ ಎಂಬ ಹೊಸ ಪಕ್ಷ ಸ್ಥಾಪಿಸಿದ್ದರಿಂದ ಬಿಜೆಪಿಗೆ ಅದು ದೊಡ್ಡ ಹೊಡೆತವಾಗಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್, ತಕ್ಷಣವೇ ನಾನು ಇದರ ಬಗ್ಗೆ ಹೇಳುವುದಿಲ್ಲ. ಈ ಹೊಸ ಪಕ್ಷದ ಕುರಿತಾದ ಬೆಳವಣಿಗೆಯನ್ನು ನೋಡಿಕೊಂಡು, ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಈ ವಿಚಾರದ ಕುರಿತು ನನ್ನ ಜೊತೆ ಯಾರು ಮಾತನಾಡಿಲ್ಲ ಎಂದರು.
ಹಾಗೆ ಜನಾರ್ದನ ರೆಡ್ಡಿ ಅವರಿಗೆ ಪಕ್ಷದ ಕುರಿತು ಅಸಮಾಧಾನವಿತ್ತಾ ಎಂದು ಕೇಳಿದಾಗ, ನಾನು ಅವರೊಂದಿಗೆ ಇತ್ತೀಚೆಗೆ ವೈಯಕ್ತಿಕ ಸಂಪರ್ಕ ಹೊಂದಿಲ್ಲ. ಅದರ ಬಗ್ಗೆ ನನಗೆ ಯಾವುದೇ ಮುನ್ಸೂಚನೆ ಇಲ್ಲ, ಅವರ ಮನಸಲ್ಲಿ ಏನು ಇದೆ ಅನ್ನೋದು ಸಹ ನನಗೆ ಗೊತ್ತಿಲ್ಲ ಎಂದರು. ಜೊತೆಗೆ ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎಂಬ ವಿಚಾರಕ್ಕೆ ಹೆಚ್ಚಿಗೆ ಪ್ರತಿಕ್ರಿಯೆ ನೀಡಲಾರೆ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಇದೆಲ್ಲದರ ಹೊರತಾಗಿ, ಪಕ್ಷದವರೆಲ್ಲರೂ ಈ ಕುರಿತು ನಾಯಕರ ಜೊತೆ ಚರ್ಚಿಸುತ್ತೇವೆ, ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದೇ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಇಂದು ಇದೆಲ್ಲದಕ್ಕೂ ಸ್ವತಃ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತೆರೆ ಎಳೆದಿದ್ದಾರೆ.
ಹೌದು, ಹಲವು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಅವರು ಸ್ವಂತ ಪಕ್ಷ ರಚಿಸುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಚಾಲುಕ್ಯ ವೃತ್ತದ ಸಮೀಪದಲ್ಲಿರುವ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಮುಂಬರಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಸ್ಫರ್ಧಿಸುತ್ತೇನೆ. ಹಾಗೆ ಯಾವ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಾರೆ ಎಂಬ ಎಲ್ಲರ ಪ್ರಶ್ನೆಗೆ ಗಂಗಾವತಿ ಕ್ಷೇತ್ರದಿಂದಲೇ ಸ್ಫರ್ಧಿಸುತ್ತೇನೆ ಎಂದು ಹೆಳುವ ಮೂಲಕ ಉತ್ತರ ನೀಡಿದ್ದಾರೆ.
ತಮ್ಮ ಪಕ್ಷ ಘೋಷಿಸಿದ ರೆಡ್ಡಿ: ಸುದ್ದಿಗೋಷ್ಟಿಯಲ್ಲಿ ಇಷ್ಟೇ ಅಲ್ಲದೆ ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಫರ್ಧಿಸಲಿರುವ ಜನಾರ್ದನ ರೆಡ್ಡಿ ಅವರು ತಮ್ಮ ಹೊಸ ಪಕ್ಷ "ಕಲ್ಯಾಣ ರಾಜ್ಯ ಪ್ರಗತಿ" ಎಂದು ಘೋಷಿಸಿದ್ದಾರೆ.
ಅದೇನೆ ಇರಲಿ, ವಾಜಪೇಯಿ ಸಿದ್ಧಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ. ಇನ್ನು ಮುಂದೆ ನಾನು ಆ ಪಕ್ಷದ ಸದಸ್ಯ ಅಲ್ಲ. ಹಾಗೆ ನಾನು ಹೊಂದಾಣಿಕೆ ರಾಜಕಾರಣಿಯೂ ಅಲ್ಲ. ಇದರಿಂದ ನಾನು ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ, ನಾನು ಜನರ ಆರ್ಶೀವಾದದೊಂದಿಗೆ ಕೆಲಸ ಮಾಡಿಕೊಂಡು ಮುಂದೆ ಹೋಗುತ್ತೇನೆ ಎಂದಿದ್ದಾರೆ.
ಯಾರ ಮಾತು ಕೇಳಿ ಪಕ್ಷ ಕಟ್ಟುತ್ತಿಲ್ಲ: ಇದಕ್ಕಿಂತ ಮುಖ್ಯವಾಗಿ ರೆಡ್ಡಿಯವರು ಬಹಿರಂಗವಾಗಿ ತಾನು ಯಾರದ್ದೇ ಮಾತು ಕೇಳಿ ಪಕ್ಷ ಕಟ್ಟುತ್ತಿಲ್ಲ. ನಮ್ಮ ಪಕ್ಷದ ಹೆಸರನ್ನು ಈಗಾಗಲೇ ನೋಂದಾಯಿಸಲಾಗಿದೆ. ಹಾಗೆ ಇನ್ನು ಹತ್ತು ಹದಿನೈದು ದಿನದಲ್ಲೇ ಮತ್ತೊಂದು ಸುದ್ದಿಗೋಷ್ಟಿ ನಡೆಸಿ ತಮ್ಮ ಹೊಸ ಪಕ್ಷದ ಚಿಹ್ನೆ, ಧ್ವಜ, ಕಾರ್ಯಾಲಯ, ಪ್ರಣಾಳಿಕೆ ಜೊತೆಗೆ ಹಲವಾರು ಅಭ್ಯರ್ಥಿಗಳ ಸಮ್ಮುಖದಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಮಾಹಿತಿ ತಿಳಿಸಲಿದ್ದೇನೆ ಎಂದು ಹೇಳಿದ್ದಾರೆ.
ಈ ಮೂಲಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷದ ಕುರಿತಾದ ಎಲ್ಲಾ ಊಹಾಪೋಹಗಳಿಗೆ ತೆರೆ ಎರೆದು ತಮ್ಮ ಹೊಸ ಪಕ್ಷದ ಗಟ್ಟಿ ನಿರ್ಧಾರವನ್ನು ಇಡೀ ದೇಶಕ್ಕೆ ಇಂದು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಪಕ್ಷ ಬಿಡುವವರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ ಚಿಂತೆ!