ಹುಬ್ಬಳ್ಳಿ: ಈ ಹಿಂದೆ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿ ಜನಗಣತಿ ಹೆಸರಲ್ಲಿ ಜಾತಿ ಒಡೆಯುವ ಕೆಲಸ ಮಾಡಿದ್ದರು. ಅಲ್ಲದೇ ಜಾತಿ ಉಪಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ ಪರಿಣಾಮ ಸರ್ಕಾರಕ್ಕೆ190 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಗ್ಲಾಸ್ ಹೌಸ್ನಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಶೆಟ್ಟರ್, ಜಾತಿ ಜನಗಣತಿ ಮೂಲಕ ಸಿದ್ದರಾಮಯ್ಯ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದರು. ಇನ್ನೂ ಆ ವರದಿ ಕ್ಯಾಬಿನೆಟ್ ನಲ್ಲಿ ಮಂಡನೆಯಾಗಿಲ್ಲ, ಜಾತಿ ಜನಗಣತಿಯನ್ನು ನಾವು ಈ ಹಿಂದೆಯೇ ವಿರೋಧಿಸಿದ್ದೆವು. ಅದರಂತೆ ವರದಿ ತಿರಸ್ಕರಿಸುವ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚಿಸಲಾಗುವುದು ಎಂದರು.
ನರೆ ಪರಿಹಾರದ ಬಗ್ಗೆ ರಾಜ್ಯದ ಜನರಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ ಕಾಂಗ್ರೆಸ್ ನೆರೆ ಹಾವಳಿಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ನರೆ ಹಾವಳಿಗೆ ಸಂಬಂಧಿಸಿದಂತೆ ರಾಜ್ಯದ ಬೊಕ್ಕಸದಲ್ಲಿ ಹಣವಿದ್ದು, ಅದರ ಮೂಲಕ ನರೆ ಸಂತ್ರಸ್ತರಿಗೆ 10 ಸಾವಿರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೇ ಮನೆ ನಿರ್ಮಾಣಕ್ಕೆ 5 ಲಕ್ಷದವರೆಗೆ ಹಣವನ್ನು ನೀಡಲಾಗುವುದು ಶೆಟ್ಟರ್ ಭರವಸೆ ನೀಡಿದ್ರು.
ಮೈಸೂರು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ರೀತಿ ಕಿತ್ತೂರು ಉತ್ಸವ ಆಚರಣೆ ಯಾಕಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಭಾಗದ ಜನರ ಅಭಿಪ್ರಾಯ ಪಡೆದೇ ಸರಳ ಉತ್ಸವ ಆಚರಣೆಗೆ ಮುಂದಾಗಿದ್ದೇವೆ. ಅಲ್ಲದೇ, ಉತ್ಸವದಿಂದ ಉಳಿದ ಹಣವನ್ನು ನೆರೆ ಸಂತ್ರಸ್ತರ ಕೆಲಸಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆಂದು ಮಾಹಿತಿ ನೀಡಿದರು.