ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಎರಡು ದಿನಗಳ ಒಳಗೆ ಅಂತಿಮವಾಗಲಿದೆ. ಪಕ್ಷ ಈಗಾಗಲೇ ಚುನಾವಣೆ ತಯಾರಿ ಮಾಡಿಕೊಂಡಿದೆ. ಸಚಿವ ಸ್ಥಾನವೇ ಬೇಡ ಎಂದು ಬಿಟ್ಟುಕೊಟ್ಟಿದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದ ಉಣಕಲ್ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಅಂತೆ, ಕಂತೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಚಕ್ರವರ್ತಿ ಸೂಲೆಬೆಲೆ ಅವರ ಲೇಖನಗಳನ್ನು ಓದಿದ್ದೇನೆ. ಅವರ ಪುಸ್ತಕಗಳನ್ನು ಓದಿದ್ದೇನೆ, ಭಾಷಣಗಳನ್ನು ಕೇಳಿದ್ದೇನೆ. ಹಿಂದೂ ಸಮಾಜದ ಸಂಘಟನೆ ಮತ್ತು ಉದ್ಧಾರಕ್ಕೆ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರು ಬರೆದಂಥ ವೈಚಾರಿಕಪೂರ್ಣ ಲೇಖನವನ್ನು ನಾನೆಲ್ಲೂ ನೋಡಿಲ್ಲ. ಅವರಂಥ ವಾಗ್ಮಿ, ಚಿಂತಕರ ಲೇಖನಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿದರೆ ಯಾವುದೇ ತೊಂದರೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಜ್ಞಾನವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದರು.
ಟಿಪ್ಪು ಒಬ್ಬ ನರಭಕ್ಷಕ, ಚಿತ್ರದುರ್ಗದ ಮದಕರಿ ನಾಯಕ ಜನಾಂಗದ ಸಾಮಾನ್ಯ ವ್ಯಕ್ತಿಯನ್ನು ಕೇಳಿದರೂ ಸಹ ಅದೇ ರೀತಿ ಕೊಡಗಿನಲ್ಲೂ ಸಹ ಟಿಪ್ಪು ಹಾಗೂ ಅವನ ಆಡಳಿತದಲ್ಲಿ ದೌರ್ಜನ್ಯ ನಡೆದಿತ್ತು ಎಂದು ಹೇಳುತ್ತಾರೆ. ಅಂತವರನ್ನ ಪಠ್ಯದಿಂದ ಕೈ ಬಿಟ್ಟಿದ್ದರೆ ತಪ್ಪಿಲ್ಲ. ಹೆಚ್. ವಿಶ್ವನಾಥ ಅವರ ಹೇಳಿಕೆ ವೈಯಕ್ತಿಕ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೇಳಿಕೆಯನ್ನು ಪಕ್ಷ ಗಮನಿಸುತ್ತದೆ. ಭಗತ್ ಸಿಂಗ್ ಅವರ ಕುರಿತು ಕೈಬಿಟ್ಟಿದ್ದಾರೆ ಎನ್ನುವ ಹೇಳಿಕೆಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಅವರ ಕುರಿತ ಪಠ್ಯವನ್ನು ಕೈ ಬಿಟ್ಟಿಲ್ಲ ಎಂದು ಹೇಳಿದರು.