ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ. ಕೋವಿಡ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಬೇಕಾಬಿಟ್ಟಿ ಹಣ ವಸೂಲಿ ನಡೆದಿದೆ ಎಂದು ಖಾಸಗಿ ಆಸ್ಪತ್ರೆಗಳ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.
ನಿನ್ನೆ ಕಿಮ್ಸ್ನಲ್ಲಿ ನಡೆದ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಮ್ಮುಖದಲ್ಲೇ ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆ ಬಗ್ಗೆ ಶೆಟ್ಟರ್ ಕಿಡಿಕಾರಿದರು. ಈ ಹಿಂದೆಯು ಖಾಸಗಿ ಆಸ್ಪತ್ರೆಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದ ಅವರು, ಈಗ ಮತ್ತೊಮ್ಮೆ ಸಾರ್ವಜನಿಕ ಸಮಾರಂಭದಲ್ಲಿ ವೈದ್ಯರು, ವೈದಕೀಯ ಸಿಬ್ಬಂದಿಗಳು ಹಾಗೂ ಆರೋಗ್ಯ ಸಚಿವರ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಸೋಂಕಿತರನ್ನ ಖಾಸಗಿ ಆಸ್ಪತ್ರೆಯವರು ಸಹ ಕಿಮ್ಸ್ಗೆ ದಾಖಲು ಮಾಡುವಂತೆ ಸೂಚಿಸುತ್ತಾರೆ. ಕೋವಿಡ್ ಸೊಂಕಿತರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ರೆ 10 ಲಕ್ಷದವರೆಗೆ ಹಣ ವಸೂಲಿ ಮಾಡಲಾಗುತ್ತದೆ. ಖಾಸಗಿ ಅಸ್ಪತ್ರೆಗಳು ಮಾನವೀಯತೆ ಮರೆತಿದ್ದು ಸಾಕಷ್ಟು ಬೇಸರ ಮೂಡಿಸಿದೆ ಎಂದರು.
ಮಾನವೀಯತೆ ಮರೆತರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಶೆಟ್ಟರ್ ಖಡಕ್ ಎಚ್ಚರಿಕೆ ನೀಡಿದರು.