ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈಗಾಗಲೇ ಡಿಸಿಗಳಿಗೆ ಸುತ್ತೋಲೆ ಬಂದಿದೆ. ಜನರು ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಗಣೇಶ ಚತುರ್ಥಿಗೆ ಕೊರೊನಾ ಹಿನ್ನೆಲೆ ನಿರ್ಬಂಧ ಹೇರಲಾಗಿದೆ. ಇದನ್ನು ಭಾವನಾತ್ಮಕ ವಿಷಯ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಮಹದಾಯಿ ಕಾಮಗಾರಿ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಬೇಕಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮಹದಾಯಿ ವಿಚಾರದಲ್ಲಿ ಯಾವುದೇ ಬಾಕಿ ಕೆಲಸ ನಿಂತಿಲ್ಲ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ನಾವೇ ಮಾಡುತ್ತೇವೆ ಎಂದು ಭರವಸೆ ನೀಡಿದರು.