ಧಾರವಾಡ: ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಈ ಮೂಲಕ ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕ್ಯಾಸಿನೋಗೂ ಹೋಗಬಾರದು, ಜೂಜು ಆಡಬಾರದು ಅಂತೆಲ್ಲ ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ ಜಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಇದೆಲ್ಲ ಹೊರ ಬರಲಿಲ್ಲ, ಇವರು ಅಧಿಕಾರದಲ್ಲಿದ್ದಾಗ ಅದಕ್ಕೆಲ್ಲ ರಕ್ಷಣೆ ಕೊಟ್ಟಿದ್ದರು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಎಲ್ಲವೂ ಹೊರಬರುತ್ತಿದೆ. ಇನ್ನೂ ಬಹಳ ಜನ ಇದರಲ್ಲಿ ಹೊರ ಬರುತ್ತಾರೆ ಎಂದು ಶೆಟ್ಟರ್ ಹೇಳಿದರು.
ರಾಜಕೀಯ ಪಕ್ಷದವರು ಡ್ರಗ್ಸ್ ಕೇಸ್‌ನಲ್ಲಿದಾರೆಂಬ ಪತ್ರಕರ್ತರ ಪ್ರಶ್ನೆಗೆ ಹೆಸರು ಗೊತ್ತಿದ್ದರೆ ಹೇಳಿಬಿಡಿ. ನೀವು ಹೆಸರು ಕೊಡಿ ನಾನೇ ತನಿಖೆ ಮಾಡಲು ಹೇಳ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಿಬಿಐ ದುರುಪಯೋಗ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೂ ತಪ್ಪು ಮಾಡಿಲ್ಲವೋ ಅವರು ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ, ಜಮೀರ್ ತಪ್ಪು ಮಾಡಿಲ್ಲ ಅಂತಾದ್ರೆ ಯಾಕೆ ಹೆದರಬೇಕು. ಯೋಗೀಶಗೌಡ ಹತ್ಯೆ ಪ್ರಕರಣದಲ್ಲೂ ತಪ್ಪು ಮಾಡದವರು ಹೆದರಬೇಕಾಗಿಲ್ಲ ಎಂದು ಶೆಟ್ಟರ್ ಹೇಳಿದರು.