ಧಾರವಾಡ : ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು. ಧಾರವಾಡ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾನ ನಾಗರಿಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ. ಇದು ಜಾರಿಗೆ ಬರಬೇಕು. ಇದಕ್ಕಾಗಿ ಜುಲೈ 18 ರಿಂದ ಸಹಿ ಅಭಿಯಾನ ಆರಂಭಿಸುತ್ತೇವೆ. ಅವತ್ತು ಇಡೀ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಆರಂಭ ಆಗಲಿದೆ ಎಂದರು.
5 ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಸ್ವಾಮೀಜಿ, ವಕೀಲರು, ವೈದ್ಯರು ಸೇರಿ ಅನೇಕ ಗಣ್ಯ ನಾಗರಿಕರಿಂದ ಉದ್ಘಾಟನೆ ಮಾಡಲಾಗುವುದು. ಸಂವಿಧಾನದ 44ನೇ ಕಲಂ ಸಮಾನತೆ ಕಾನೂನು ಉಲ್ಲೇಖ ಮಾಡುತ್ತದೆ. 72 ವರ್ಷವಾದರೂ ಸಮಾನ ಕಾನೂನು ಬಂದಿಲ್ಲ. ಇದಕ್ಕೆಲ್ಲ ಕಾಂಗ್ರೆಸ್ನ ಸಮುದಾಯವೊಂದರ ತುಷ್ಠೀಕರವೇ ಕಾರಣ. ಸುಮಾರು 20 ವರ್ಷಗಳಿಂದ ಹೈಕೋರ್ಟ್, ಸುಪ್ರಿಂಕೋರ್ಟ್ ಸಹ ಇದರ ಜಾರಿ ಬಗ್ಗೆ ಹೇಳುತ್ತ ಬಂದಿವೆ. ಯಾವ ದೇಶದಲ್ಲಿಯೂ ಎರಡು ಕಾನೂನು ಇಲ್ಲ ನಮ್ಮ ದೇಶದಲ್ಲಿ ಮಾತ್ರ ಎರಡು ರೀತಿಯ ಕಾನೂನು ನಡೆಯುತ್ತಿದೆ. ಇವತ್ತು ಇಡೀ ದೇಶದಲ್ಲಿ ಈ ಕಾನೂನಿನ ಬಗ್ಗೆ ಸಕಾರಾತ್ಮಕ ಚರ್ಚೆ ಶುರುವಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಶಾಖೆಗಳಿಗೆ ಕೊಟ್ಟ ಜಾಗ ತಡೆ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿಯಾಗಿದೆ. ಹಿಂದುತ್ವದ ಎಲ್ಲವನ್ನೂ ವಿರೋಧಿಸುತ್ತಾರೆ. ಆರ್‌ಎಸ್‌ಎಸ್‌ಗೆ ಭೂಮಿ ನೀಡಿರುವ ವಿಚಾರ ಅದು ಗೋ ಶಾಲೆ ಮಾಡಲು ತೆಗೆದುಕೊಂಡಿದ್ದಾರೆ. ಅದು ಆರ್‌ಎಸ್‌ಎಸ್‌ಗೆ ಸೇರಿದ ಸಂಸ್ಥೆ ಅಂತಾ ತಡೆ ಹಿಡಿದಿದ್ದಾರೆ. ನಾಗರಕಟ್ಟೆ ಸ್ವಚ್ಛ ಮಾಡಿ ಪವಿತ್ರ ಸ್ಥಾನ ಮಾಡಿದ್ದು, ಪುನೀತ್ ಕೆರೆಹಳ್ಳಿ ಅವರ ಬಳಗ. ಆದರೆ ಅವರಿಗೆ ಪೂಜೆ ಮಾಡಲು ತಡೆ ಹಾಕುತ್ತಿದ್ದಾರೆ. ಅನುಮತಿ ಪಡೆಯಿರಿ ಅಂತಾರೆ ಎಂದು ಹರಿಹಾಯ್ದರು.
ಕೊಟ್ಟಿರುವ ಜಾಗಕ್ಕೆ ತಡೆ ಹಿಡಿದಿರುವುದು ತಪ್ಪು. ತಡೆ ವಾಪಸ್ ಪಡೆಯಬೇಕು. ಕಾಂಗ್ರೆಸ್ ಅವಧಿಯಲ್ಲಿ ಯಾವ ಯಾವ ಜಮೀನು ಯಾರಿಗೆ ಕೊಟ್ಟಿದ್ದಾರೆ ಬಹಿರಂಗ ಪಡಿಸಿ. ಎಷ್ಟು ಮಸೀದಿ, ದರ್ಗಾ, ಮದರಸಾಗಳಿಗೆ ಇವರು ಭೂಮಿ ಕೊಟ್ಟಲ್ಲವಾ? ಗೋ ಶಾಲೆಮಾಡಲು ಜಮೀನು ತೆಗೆದುಕೊಂಡರೆ ಅದರಲ್ಲಿ ಏನು ಲಾಭದ ವ್ಯವಹಾರ ಇದೆ ಎಂದರು. ಈ ವೇಳೆ, ವಿಧಾನಸೌಧದಲ್ಲಿ ನಮಾಜ್‌ಗೆ ಅವಕಾಶ ಕೇಳಿರುವ ವಿಚಾರಕ್ಕೆ ಮಾತನಾಡಿ ಅವಕಾಶ ನೀಡಿದರೆ ವಿಧಾನಸೌಧದೊಳಗೆ ಸಾವಿರಾರೂ ಜನ ನಿತ್ಯ ಹನುಮಾನ ಚಾಲೀಸ್ರ್, ಭಜನೆ ಮಾಡುತ್ತೇವೆ. ನಮಾಜ್‌ಗೆ ಅವಕಾಶ ನೀಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಇದನ್ನೂ ಓದಿ : ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಬೇಕು: ಸಿ.ಟಿ. ರವಿ