ಹುಬ್ಬಳ್ಳಿ: ಸಣ್ಣ ಹಿಡುವಳಿ ಹೊಂದಿರುವ ರೈತರ ಜಮೀನಿಗೆ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಒದಗಿಸುವ ಗಂಗಾ ಕಲ್ಯಾಣ ಯೋಜನೆ ಅನುಷ್ಠಾಕ್ಕೆ ಏಕ ಗುತ್ತಿಗೆದಾರರನ್ನು ನೇಮಿಸುವ ಬದಲಿಗೆ, ಹಲವು ನೋಂದಾಯಿತ ಕಂಪನಿಗಳ ಹೆಸರನ್ನು ಅಧಿಸೂಚಿಸಲಾಗುವುದು ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು ಸರ್ಕಾರ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ. ರೈತರು ತಾವು ಇಚ್ಛೆಪಟ್ಟ ಕಂಪನಿಯಿಂದ ಸ್ವಂತ ಉಸ್ತುವಾರಿ ಹಾಗೂ ವಿವೇಚನೆ ಮೇರೆಗೆ ಕೊಳಬೆ ಬಾವಿ ಹಾಕಿಸಿಕೊಳ್ಳಬಹುದಾಗಿದೆ. ಕೊಳವೆ ಬಾವಿ, ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ವಿವಿಧ ಕಂಪನಿಗಳಿಗೆ ಟೆಂಡರ್ ನೀಡುವ ಬದಲು, ಏಕ ಕಂಪನಿಗೆ ಈ ಮೂರು ಕಾರ್ಯನಿರ್ವಹಿಸುವ ಹೊಣೆ ನೀಡಲಾಗುವುದು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಅಸ್ತಿತ್ವಕ್ಕೆ ಬಂದು 40 ವರ್ಷಗಳಾಗಿವೆ. ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ, ಕೌಶಲ್ಯ ತರಬೇತಿ, ಉನ್ನತ ವ್ಯಾಸಾಂಗಕ್ಕೆ ಬಡ್ಡಿರಹಿತ ಸಾಲ, ಕುಶಲ ಕರ್ಮಿಗಳು ಹಾಗೂ ವೃತ್ತಿ ಕಸುಬುದಾರರಿಗೆ ಸಹಾಯಧನ, ಗಂಗಾ ಕಲ್ಯಾಣ ಹೀಗೆ ಹಲವಾರು ಯೋಜನೆಗಳನ್ನು ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ 200 ಜಾತಿಗೆ ಸೇರಿದ ಜನರು ಯೋಜನೆಗಳ ಲಾಭ ಪಡೆಯಬಹುದು. ಆದರೆ ನಿಗಮದ ಕುರಿತು ಹಲವು ಜನರಿಗೆ ಮಾಹಿತಿ ಇಲ್ಲದಂತಾಗಿದೆ. ನಿಗಮದ ಯೋಜನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.