ಧಾರವಾಡ: ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆ ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರ ಸಭೆ ಮಾಡುತ್ತಿದ್ದೇನೆ ಎಂದು ಧಾರವಾಡದಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಧಾರವಾಡದ ಲಿಂಗಾಯತ ಭವನದಲ್ಲಿ ನಡೆದ ಭಕ್ತರು ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಸ್ವಾಮೀಜಿ ಮಾತನಾಡಿ, ನಾನು ಮೂರುಸಾವಿರ ಮಠದ ಜಗದ್ಗುರುಗಳನ್ನು ಭೇಟಿ ಮಾಡುತ್ತೇನೆ. ನಾವು ಮಠಕ್ಕೆ ಸ್ವಾಮೀಜಿಯಾಗಲು ಖಾವಿಧಾರಿಯಾಗಿಲ್ಲ, ಸಮಾಜಕ್ಕಾಗಿ ನಾವು ಖಾವಿಧಾರಿಯಾಗಿದ್ದೇವೆ.
ಸ್ವಾಮಿತ್ವಕ್ಕೆ ಮಠವೇ ಬೇಕಾಗಿಲ್ಲ, ನನ್ನ ಗೌರವದ ಪ್ರಶ್ನೆ ಬಂದಿದೆ. ಹೀಗಾಗಿ ನಾನು ಈಗ ಮುಂದೆ ಬಂದಿದ್ದೇನೆ ಎಂದರು. ನಾನು ಗೂಂಡಾ, ಅಯೋಗ್ಯ ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗೂಂಡಾ ಆಗಿದ್ದರೇ, ಅಯೋಗ್ಯ ಆಗಿದ್ದರೇ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ.
ವಿರೋಧಿಗಳು ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.