ಹುಬ್ಬಳ್ಳಿ : ಕಿಮ್ಸ್ ಸಿಬ್ಬಂದಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 1100 ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಜೊತೆ ಚರ್ಚಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿ ನಿರ್ಮಾಣವಾಗಿರುವ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಕಟ್ಟಡದ ನೂತನ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಈಗಾಗಲೇ ತಮಗೆಲ್ಲರಿಗೂ ಗೊತ್ತಿರುವಂತೆ ಕಿಮ್ಸ್ ಆವರಣದಲ್ಲಿ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಕಟ್ಟಿಸಿ ಅದನ್ನು ಕಿಮ್ಸ್ಗೆ ಹಸ್ತಾಂತರ ಮಾಡಿದ್ದೇವೆ. ಅದಾದ ನಂತರ ಕಿಮ್ಸ್ದು ಹಾಸಿಗೆಗಳ ಸಂಖ್ಯೆ ಜಾಸ್ತಿಯಾಗಿದೆ. ಯಾವಾಗ ಹಾಸಿಗೆ ಜಾಸ್ತಿಯಾಗಿತ್ತೋ, ಆಗ ಎಮರ್ಜೆನ್ಸಿ ವಾರ್ಡ್ ಹಾಗೂ ಬೆಡ್ಗಳ ಸಂಖ್ಯೆಯ ಅಗತ್ಯವೂ ಅಧಿಕವಾಗುತ್ತದೆ ಎಂದರು.
ಎಲ್ಲಾ ಬೆಡ್ಗಳಿಗೂ ಕೂಡಾ ಐಸಿಯು ವ್ಯವಸ್ಥೆ: ಆ ಹಿನ್ನೆಲೆಯಲ್ಲಿ ಇಲ್ಲಿನ ಡೈರೆಕ್ಟರ್ ಆದಂತಹ ರಾಮಲಿಂಗಪ್ಪ ಅವರು ಹಾಗೂ ಅರುಣ್ ಕುಮಾರ್ ಅವರು, ನಮಗೆಲ್ಲರಿಗೂ ಈ ಹಿಂದೆಯೇ ತಮ್ಮ ವಿನಂತಿಯನ್ನು ತಿಳಿಸಿದ್ದರು. ಅದರ ಪರಿಣಾಮ ಕಿಮ್ಸ್ಗೆ 60 ಕೋಟಿ ರೂಪಾಯಿ ಮಂಜೂರು ಆಗಿದೆ. ಅದರಲ್ಲಿ 28 ಕೋಟಿ ರೂ. ಎಮರ್ಜೆನ್ಸಿ ವಾರ್ಡ್ಗೆ ಬಿಡುಗಡೆಯಾಗಿದೆ. ಅಲ್ಲಿ 30 ಬೆಡ್ಗಳು ಜಾಸ್ತಿಯಾಗಿವೆ. ಅದರಂತೆ ಎಲ್ಲಾ ಬೆಡ್ಗಳಿಗೂ ಕೂಡಾ ಐಸಿಯು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಎಂಆರ್ಐ ಬೇಡಿಕೆ ಈಡೇರಿಸಲಾಗಿದೆ : ಹಾಸ್ಟೆಲ್ 23 ಕೋಟಿ ರೂಪಾಯಿ, ಸಲಕರಣೆಗಳು 9 ಕೋಟಿ ರೂಪಾಯಿ, ಒಟ್ಟು 60 ಕೋಟಿ ರೂ. ಮತ್ತು ಎಮರ್ಜೆನ್ಸಿ ರೆಸ್ಪಾನ್ಸ್ ಫಂಡ್ ಅಡಿ ಎಂಆರ್ಐಗೆ ಅದು ಸೆಪರೇಟ್ ಆಗಿ 12 ಕೋಟಿ ರೂಪಾಯಿಯನ್ನು ನಾವು ಕೊಡಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಎಂಆರ್ಐ ಬೇಕು ಎಂಬ ಬೇಡಿಕೆ ಬಂದಿತ್ತು. ಅದನ್ನೂ ಕೂಡಾ ನಾನು ಪೂರೈಸಿ ಕೊಟ್ಟಿದ್ದೇನೆ. 12 ಕೋಟಿ ಮಂಜೂರಾಗಿದೆ. ಮಷಿನ್ ಬಂದಿದೆ. ಇಷ್ಟರಲ್ಲೇ ಹಾಸ್ಟೆಲ್ ಹಾಗೂ ಎಮರ್ಜೆನ್ಸಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೂ ವಿನಂತಿ ಮಾಡಿಕೊಂಡು ಸಮಯ ತೆಗೆದುಕೊಂಡು ಉದ್ಘಾಟನೆಯನ್ನು ಮಾಡುತ್ತೇವೆ. ಕನ್ಸ್ಟ್ರಕ್ಟನ್ ಕೂಡಾ ಚೆನ್ನಾಗಿ ಮಾಡಿದ್ದಾರೆ. ಈಗಾಗಲೇ ತೀರಾ ಉಪಯೋಗ ಇದ್ದಿದ್ದರಿಂದ ಮೊದಲ ಫ್ಲೋರ್ನ ಉಪಯೋಗವನ್ನು ಶುರು ಮಾಡಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 72 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಮ್ಸ್ನ ವಿಶೇಷ ತುರ್ತು ಚಿಕಿತ್ಸಾ ಘಟಕ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡು ಕಟ್ಟಡ ಉದ್ಘಾಟನೆ ಆಗಬೇಕಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದರು.
ಸತೀಶ್ ಜಾರಕಿಹೋಳಿಗೆ ತಿರುಗೇಟು ನೀಡಿದ ಜೋಶಿ: ಇವಿಎಂ ಹೇಳಿಕೆ ಸಮರ್ಥಿಸಿಕೊಂಡ ಸತೀಶ್ ಜಾರಕಿಹೋಳಿಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಜೋಶಿ, ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ನವರು ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಐದು ಗ್ಯಾರಂಟಿ ಯೋಜನೆ ವಿಚಾರದಲ್ಲೂ ಹಾಗೆ ಸುಮ್ಮನೆ ಆಶ್ವಾಸನೆ ಕೊಟ್ಟಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ವೋಟ್‌ಗಾಗಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತೇವೆ ಅಂದಿದ್ರು ಎಂಬುದನ್ನು ಅವರು ನೆನಪಿಸಿದರು.
ಸಿದ್ದರಾಮಯ್ಯ ಏಮ್ಸ್‌ನ್ನು ರಾಯಚೂರಿಗೆ ಶಿಫ್ಟ್ ಮಾಡಲು ಕೇಂದ್ರಕ್ಕೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ನಾನು ಹೆಚ್ಚಿಗೆ ಮಾತಾಡಲ್ಲ. ಧಾರವಾಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಸಿದ್ದರಾಮಯ್ಯನವರಿಗೆ ಏನು ಹೇಳ್ತಾರೆ ಅನ್ನೋದು ನನ್ನ ಪ್ರಶ್ನೆ. ಕಾಂಗ್ರೆಸ್ ಜನಪ್ರತಿನಿಧಿಗಳು ಏನು ಹೇಳ್ತಾರೆ ಅವರೇ ಡಿಸೈಡ್ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ: Guarantee scheme: ಗ್ಯಾರಂಟಿ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ ಜನರಿಗೆ ಮೋಸ: ಕಾಂಗ್ರೆಸ್ ವಿರುದ್ಧ ಜೋಶಿ ಕಿಡಿ