ಹುಬ್ಬಳ್ಳಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಪ್ರಿಯಕರನ ಜೊತೆ ಸೇರಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿ ರೈಲ್ವೆ ಹಳಿಯ ಮೇಲೆ ಹಾಕಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಚಂದ್ರಪ್ಪ ಲಮಾಣಿ ಎಂಬಾತ ಕೊಲೆಯಾದ ವ್ಯಕ್ತಿ. ಪತ್ನಿ ಶೋಭಾ ಚಂದ್ರಪ್ಪ ಲಮಾಣಿ ಹಾಗೂ ಪ್ರಿಯಕರ ದಿಳ್ಳೆಪ್ಪ ಯಮನಪ್ಪ ಅಂತರವಳ್ಳಿ ಕೊಲೆಗೈದ ಆರೋಪಿಗಳು ಎಂದು ತನಿಖೆಯ ಮೂಲಕ ತಿಳಿದು ಬಂದಿದೆ.
ಚಂದ್ರಪ್ಪ ಮೂಲತಃ ಶ್ರೀನಿವಾಸಪುರದ ಗಂಗಾಜಲ ತಾಂಡದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ, ಹೆಂಡತಿ ತನ್ನ ಪ್ರಿಯಕರ ದಿಳ್ಳೆಪ್ಪ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಲಾಕ್ಡೌನ್ ಘೋಷಣೆಯಾದ ಸಂದರ್ಭದಲ್ಲಿ ಪರಸ್ಪರ ಸಂಪರ್ಕಕ್ಕೆ ತೊಂದರೆಯಾದ್ದರಿಂದ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಅಲ್ಲದೇ, ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೊಬ್ಬ ಭಾಗಿಯಾಗಿರುವುದು ತನಿಖೆ ಮೂಲಕ ಗೊತ್ತಾಗಿದೆ.
ರಾಣೆಬೆನ್ನೂರು ರೈಲ್ವೆ ನಿಲ್ದಾಣದ ಹತ್ತಿರ ಚಂದ್ರಪ್ಪನ ಶವ ದೊರೆತಿದ್ದು,ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ರೈಲ್ವೆ ಸಿಪಿಐ ಜೆ ಎಂ ಕಾಲಿಮಿರ್ಚಿ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.