ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿಯ ಯುವಕರ ತಂಡವೊಂದು ಹಸಿದವರ ಹಸಿವು ನೀಗಿಸುವ ಜೊತೆಗೆ ಅನೇಕ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ.
ಸುಮಾರು 10 ವರ್ಷಗಳಿಂದ ಈ ಮಹತ್ತರ ಕಾರ್ಯ ಮುನ್ನಡೆಸಿಕೊಂಡು ಹೊರಟಿರುವುದು ವಿನ್ಸ್ ಗೆಳಯರ ಬಳಗ ಎಂಬ ಯುವಕರ ತಂಡ. ನಗರದಲ್ಲಿ ಉದ್ಯೋಗವೂ ಅಷ್ಟಕ್ಕಷ್ಟೇ.. ತುತ್ತಿನ ದುಡಿಮೆಗಾಗಿ ಅದೆಷ್ಟೋ ಮಂದೆ ಪರದಾಡುತ್ತಾರೆ. ಅನಾಥರು, ಬಡ ಮಕ್ಕಳು ಸೇರಿ ಅದೆಷ್ಟೋ ಮಂದಿ ನಾನಾ ಕಾರಣಕ್ಕೆ ಮನೆ ತೊರೆದು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ತಾಣಗಳಲ್ಲಿ ನಿತ್ಯವೂ ಊಟಕ್ಕಾಗಿ ಜನರ ಮುಂದೆ ಕೈ ಚಾಚಿ ಬೇಡುತ್ತಾರೆ. ಇದೆಲ್ಲವನ್ನೂ ಅರಿತು ನಿರ್ಗತಿಕರಿಗೆ, ಬಡವರಿಗೆ ತಮ್ಮ ಕೈಲಾಗುವ ರೀತಿ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಈ ತಂಡದ ಯುಕರು.
ಹತ್ತಕ್ಕೂ ಹೆಚ್ಚು ಗೆಳೆಯರನ್ನು ಹೊಂದಿರುವ ವಿನ್ಸ್ ಗೆಳೆಯರ ಬಳಗ, ಹುಬ್ಬಳ್ಳಿಯ ಪ್ರಮುಖ ಸ್ಲಂ ಹಾಗೂ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಹೊಸೂರ ಬಳಿಯ ನಿರ್ಗತಿಕರು, ಭಿಕ್ಷುಕರು,ಅನಾಥರಿಗೆ ಸ್ವತಃ ತಾವೇ ಆಹಾರ ತಯಾರಿಸಿ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಬೀದಿಯಲ್ಲಿನ ಮೂಕ ಪ್ರಾಣಿಗಳ ಹಸಿವನ್ನೂ ನೀಗಿಸುತ್ತಿದ್ದಾರೆ. ಈ ತಂಡದ ಮಹತ್ತರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿನ್ಸ್ ಗೆಳೆಯರ ಬಳಗದ ಅಳಿಲು ಸೇವೆ ಇದೇ ರೀತಿಯಲ್ಲಿ ಮುಂದುವರೆದು ದೊಡ್ಡ ಹೆಮ್ಮರವಾಗಬೇಕು. ಇವರ ಹಾಗೇ ಎಲ್ಲರೂ ಸಹ ಹಸಿದ ಹೊಟ್ಟೆಗಳಿಗೆ ಅನ್ನ ಹಾಕುವ ಕಾರ್ಯಕ್ಕೆ ಕೈಜೋಡಿಸುವಂತಾಗಲಿ..