ಹುಬ್ಬಳ್ಳಿ: ಸಾರ್ವಜನಿಕರಿಗೆ ಮತ್ತಷ್ಟು ಶೀಘ್ರ ಹಾಗೂ ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರದಿಂದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ವೋಲ್ವೊ ಎಸಿ ಬಸ್ ಸಂಚಾರವನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದರು.
ಹುಬ್ಬಳ್ಳಿ-ಬೆಳಗಾವಿ ಹಾಗೂ ಹುಬ್ಬಳ್ಳಿ-ದಾವಣಗೆರೆ ನಡುವೆ ವೋಲ್ವೋ ಎಸಿ ಬಸ್ ಸಂಚಾರ ಆರಂಭಿಸಲಾಗಿದೆ. ಈ ಬಸ್ಗಳು ಮಾರ್ಗ ಮಧ್ಯದ ಪ್ರಮುಖ ಊರುಗಳಲ್ಲಿ ಮಾತ್ರ ನಿಲುಗಡೆ ನೀಡಿ ಬೈಪಾಸ್ ಮೂಲಕ ಸಂಚರಿಸುತ್ತವೆ.
ಇದರಿಂದ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ. ಖಾಸಗಿ ಸ್ವಂತ ವಾಹನ ಪ್ರಯಾಣಕ್ಕೆ ಹೋಲಿಸಿದಾಗ ಆರಾಮದಾಯಕ ಹಾಗೂ ಮಿತವ್ಯಕರವಾಗಿದೆ. ಹುಬ್ಬಳ್ಳಿಯಿಂದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಿಗೂ ವೋಲ್ವೊ ಬಸ್ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಗದಗ-ಹೊಸಪೇಟೆ, ಗದಗ-ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ-ಬಾಗಲಕೋಟೆ, ಹುಬ್ಬಳ್ಳಿ-ವಿಜಯಪುರ ಮಾರ್ಗಗಳಲ್ಲಿ ವೋಲ್ವೊ ಎಸಿ ಬಸ್ ಸಂಚಾರ ಆರಂಭಿಸಲು ಯೋಜಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲಕರ ವೇಳಾಪಟ್ಟಿ ಹಾಗೂ ಪ್ರೋತ್ಸಾಹಕ ಪ್ರಯಾಣ ದರ ನಿಗದಿಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.