ಹುಬ್ಬಳ್ಳಿ:ನಗರದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ದ ಶ್ರೀ ಸಿದ್ಧಾರೂಢ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರೆವೇರಿತು. ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಮಹಾಶಿವರಾತ್ರಿ ಮಹೋತ್ಸವದ ನಿಮಿತ್ತ ಜರುಗಿದ ಸಿದ್ಧಾರೂಢ ಸ್ವಾಮಿಯ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಮುಂದೆ ಸಾಗಿತು.
ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆ ಅಪಾರ ಭಕ್ತಾದಿಗಳು ಹರ ಹರ ಮಹಾದೇವ ಘೋಷಣೆ ಮಾಡುತ್ತ, ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಭಕ್ತರು ರಥೋತ್ಸವದ ಸಂಭ್ರಮವನ್ನೂ ಕಣ್ತುಂಬಿಕೊಂಡರು.
ಜಾತ್ರೆ ಕಳೆ ಹೆಚ್ಚಿಸಿದ ಮಂಗಳವಾದ್ಯ:ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ-ಮೇಳಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನೂ ಇಮ್ಮಡಿಗೊಳಿಸಿತು. ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ , ಹರ ಹರ ಮಹಾದೇವ ಎಂಬ ಭಕ್ತರ ಉದ್ಗಾರ ಮೊಳಗಿತು.
ಜಾತಿ, ಧರ್ಮದ ಸಂಕೋಲೆ ಮೀರಿದ ಜಾತ್ರೆ:ಶ್ರೀ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನೂ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಟೆಂಪೊ, ಟ್ರ್ಯಾಕ್ಟರ್, ದ್ವಿಚಕ್ರ, ಕಾರುಗಳಲ್ಲಿ ಮಾತ್ರವಲ್ಲದೆ, ಪಾದಯಾತ್ರೆ ಮೂಲಕವೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಇನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ರಾಜ್ಯದ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾರು ರಥೋತ್ಸವದಲ್ಲಿ ಪಾಲ್ಗೊಂಡು, ಪುನೀತರಾದರು.
70 ಅಡಿ ಎತ್ತರದ ತೇರು:ಮಹಾ ರಥೋತ್ಸವದ ಅಂಗವಾಗಿ ಸುಮಾರು 70 ಅಡಿ ಎತ್ತರದ ತೇರು ಶೃಂಗರಿಸಲಾಗಿತ್ತು. ಮಠದ ಆವರಣದಿಂದ ಹೊರಟ ತೇರು ಮಹಾದ್ವಾರದ ವರೆಗೆ ತಲುಪಿ ಮತ್ತೆ ಮಠಕ್ಕೆ ಮರಳಿತು.
ಇನ್ನು ಜಾತ್ರೆಗೆ ಬರುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಲು ಶ್ರೀನಿವಾಸ ನಗರದ ಉದ್ಯಾನದ ಬಳಿ, ಅಂಬೇಂಡ್ಕರ್ ಕ್ರೀ ಡಾಂಗಣ, ಆನಂದನಗರ ರಸ್ತೆ ಹೊಂದಿಕೊಂಡಿರುವ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಕರ್ನಾಟಕದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸಿದ್ಧಾರೂಢ ಮಠಕ್ಕೆ ಬರುವ ಭಕ್ತರಿಗೆ ಊಟ, ಉಪಹಾರದ ಪ್ರಸಾದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.
ಸಪ್ತಾಹ ಶಿಬಿರದಲ್ಲಿ ಧರ್ಮ ಜಾಗೃತಿ: ಸಿದ್ಧಾರೂಢ ಮಠದ ಭಕ್ತ ರಂಗಾಬದ್ದಿ ಮಾತನಾಡಿ, ಮಹಾಶಿವರಾತ್ರಿ ಪ್ರಯುಕ್ತ ಸಿದ್ಧಾರೂಢರ ರಥೋತ್ಸವ ಜರುಗುತ್ತದೆ. ಈ ಬಾರಿಯೂ ಅಚ್ಚುಕಟ್ಟಾಗಿ ಅದ್ಧೂರಿಯಾಗಿ ರಥೋತ್ಸವ ನಡೆಯುತ್ತಿದೆ.
ಲಕ್ಷಾಂತರ ಜನ ಜಾತಿ ಮತ ಪಂಥ ಯಾವುದೇ ಭೇದವಿಲ್ಲದೇ ಭಾಗವಹಿಸುವ ಜಾತ್ರೆ ಅಂದ್ರೆ ಅದೂ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ಅನ್ನಬಹುದು. ವಿವಿಧ ರಾಜ್ಯ,ರಾಜ್ಯದ ಜಿಲ್ಲೆಗಳಿಂದ ಭಕ್ತರು ಆಗಮಿಸಿ, ಸಿದ್ಧಾರೂಢ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸುವರು. ಏಳು ದಿನ ನಡೆದ ಸಪ್ತಾಹ ಶಿಬಿರದಲ್ಲಿ ಧರ್ಮ ಜಾಗೃತಿಯೂ ನಡೆಯುತ್ತದೆ ಎಂದರು.
ಇದನ್ನೂಓದಿ:ಸಿದ್ಧಾರೂಢ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ: ಶ್ರೀಗಳ ಗದ್ದುಗೆ ಪೂಜೆ