ಹುಬ್ಬಳ್ಳಿ: ಕೊರೊನಾ ಸೋಂಕಿಗೆ ಲಸಿಕೆ ಸಂಗ್ರಹಿಸಲು ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗಿದೆ.
ಇದರ ಜೊತೆ ಜೊತೆಗೆ ಹುಬ್ಬಳ್ಳಿ-ಧಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡ ಕೋವಿಡ್ ವಾಕ್ಸಿನ್ ಕೋಲ್ಡ್ ಸ್ಟೋರೇಜ್ ತಯಾರಿ ನಡೆದಿದೆ. ಜಿಲ್ಲೆಯಲ್ಲಿರುವ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮೊದಲ ಹಂತದಲ್ಲಿ ಜಿಲ್ಲೆಯ 22 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ, ಕಿಮ್ಸ್, ಎಸ್ಡಿಎಂ ಆಸ್ಪತ್ರೆಗಳಲ್ಲಿ ಲಸಿಕೆ ಸಂಗ್ರಹಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ರಾಜ್ಯ ಸರ್ಕಾರದಿಂದ ಜಿಲ್ಲೆಗೆ 98 ಲೀಟರ್ ಸಾಮರ್ಥ್ಯದ ಐಎಲ್ಆರ್ (ಐಸ್ ಲೈನಲ್ಡ್ ರೆಫ್ರಿಜಿರೇಟರ್) ನೀಡಲಾಗಿದೆ. ಹೀಗಾಗಿ ಅದರಲ್ಲಿ 21,600 ಲಸಿಕಾ ಡೋಸ್‌ಗಳನ್ನು ಸಂಗ್ರಹಿಸಬಹುದಾಗಿದ್ದು, ಜಿಲ್ಲೆಯಲ್ಲಿ 110 ಕೋವಿಡ್ ಲಸಿಕಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ.ಆರೋಗ್ಯ ಕೇಂದ್ರಗಳು ಇದೀಗ ಕೋವಿಡ್ ವಾಕ್ಸಿನ್ ನೀಡಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಲಸಿಕೆ ನೀಡಲು ವೈದ್ಯರು ಉತ್ಸುಕರಾಗಿದ್ದಾರೆ. ಅದರಲ್ಲೂ ಲಸಿಕೆ ಸಂಗ್ರಹದ ಬಳಿಕ ಆಸ್ಪತ್ರೆಗಳಿಗೆ ವಾಕ್ಸಿನ್ ಸರಬರಾಜು ಹಾಗೂ ಅವುಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್ಲಾ ವರ್ಗದ ಜನರಿಗೂ ಲಸಿಕೆ ಮುಟ್ಟಿಸಲು ಶ್ರಮಿಸಲಾಗುತ್ತಿದೆ.