ಹುಬ್ಬಳ್ಳಿ: ಹೆಡ್ ಕಾನ್ಸ್ಟೇಬಲ್ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪಕ್ಕದ ಮನೆಯ ದಂಪತಿ ಮೇಲೆ ಹಲ್ಲೆ ನಡೆಸಿ ತಾನು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಭರತೇಶ್ ಕುಟುಂಬ ಆರೋಪಿಸಿದೆ.
ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುರಾಣಿಕಮಠ ಎಂಬ ಮುಖ್ಯ ಪೇದೆ ತಮ್ಮ ಪಕ್ಕದ ಮನೆಯಲ್ಲಿ ವಾಸವಾಗಿರುವ ಭರತೇಶ್ ಕುಟುಂಬದ ಜೊತೆ ನೀರಿನ ವಿಷಯಕ್ಕೆ ಜಗಳ ಮಾಡಿದ್ದಾರೆ. ಗಲಾಟೆ ತಾರಕಕ್ಕೇರಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಇಟ್ಟಿಗೆ ಮತ್ತು ರಾಡ್ನಿಂದ ಬಡಿದಾಡಿಕೊಂಡು ಎರಡು ಕುಟುಂಬದವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದೆರಡು ವರ್ಷಗಳಿಂದ ಪೊಲೀಸಪ್ಪನ ಕುಟುಂಬ ವಿನಾಕಾರಣ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಈ ಹಿಂದೆಯೂ ಠಾಣೆ ಮೆಟ್ಟಿಲೇರಿತ್ತು. ಆದರೆ, ಪೊಲೀಸ್ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳದೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸಂಧಾನ ಮಾಡಿ ಕಳಿಸಿಕೊಟ್ಟಿದ್ದರು. ನಿನ್ನೆ ಮತ್ತೆ ಕ್ಷುಲ್ಲಕ ಕಾರಣಕ್ಕೆ ಜಗಳ ತಗೆದು ಪೇದೆ ಪುರಾಣಿಕಮಠ ತಾವೇ ಮೊದಲು ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಾಗುವ ನಾಟಕ ಮಾಡಿದ್ದಾನೆ ಎಂದು ಭರತೇಶ್ ಕುಟುಂಬ ಆರೋಪಿಸಿದೆ.
ಘಟನೆಯಲ್ಲಿ ಭರತೇಶ್ ಅವರ ಕೈ ಮುರಿದಿದ್ದು, ಅವರ ಪತ್ನಿಗೂ ಗಾಯಗಳಾಗಿವೆ. ಸದ್ಯ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರು ಕೇಸ್ ದಾಖಲಿಸಿದ್ದು, ವಿಚಾರಣೆ ಆರಂಭವಾಗಿದೆ.
ಇದನ್ನೂ ಓದಿ: ಹೆಡ್ಕಾನ್ಸ್ಟೇಬಲ್ ಮೇಲೆ ಇಟ್ಟಿಗೆಯಿಂದ ದಾಳಿ ಮಾಡಿ ತಲೆ ಸೀಳಿದ ನೆರೆಮನೆ ವ್ಯಕ್ತಿ