ಹುಬ್ಬಳ್ಳಿ : ಇಲ್ಲಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ಮೀನು ಮಾರುಕಟ್ಟೆ ನಿರ್ಮಾಣವಾಗಿ ಐದು ತಿಂಗಳು ಕಳೆದು ಹೋಗಿದೆ. ಆದರೆ, ಇನ್ನುವರೆಗೂ ಇದರ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇದರಿಂದ ಮೀನು ವ್ಯಾಪಾರಸ್ಥರು ಬಯಲಿನಲ್ಲೇ ಬಿಸಿಲು, ಮಳೆ ಎನ್ನದೆ ಸಂತೆ ನಡೆಸುವಂತಾಗಿದೆ.
ಹಲವು ವರ್ಷಗಳ ಇತಿಹಾಸ ಹೊಂದಿದ ಈ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ವಾಹನಗಳಿಂದ ಮೀನು ಇಳಿಸಲು, ನೀರಿನ ತೊಟ್ಟಿ, ಶೌಚಗೃಹ ಹೀಗೆ ಸಕಲ ಸೌಲಭ್ಯ ನೀಡಲಾಗಿದೆ. ಆದರೆ, ಇಷ್ಟೆಲ್ಲ ಸೌಲಭ್ಯದ ಯೋಜನೆ ಸಿದ್ಧವಾಗಿದ್ದರೂ ವ್ಯಾಪಾರಸ್ಥರಿಗೆ ಅದು ಕನ್ನಡಿಯೊಳಗಿನ ಗಂಟಿನಂತಾಗಿದೆ. 2022 ಜನವರಿಗೆ ಮಾರುಕಟ್ಟೆ ಪೂರ್ಣಗೊಂಡಿದ್ದರೂ, ಇದುವರೆಗೂ ಉದ್ಘಾಟನೆಗೆ ಕಾಲ ಮಾತ್ರ ಕೂಡಿ ಬಂದಿಲ್ಲ. ಇದರಿಂದ ಮೀನು ವ್ಯಾಪಾರಸ್ಥರು ಯಾವಾಗ ಮಾರುಕಟ್ಟೆ ಉದ್ಘಾಟನೆ ಆಗುತ್ತದೆ ಎಂದು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ಸುಮಾರು ಐದು ಕೊಟಿಗೂ ಹೆಚ್ಚು ಹಣ ಖರ್ಚು ಮಾಡಿ ಸುಸಜ್ಜಿತವಾದ ಕಟ್ಟಡವಿದ್ದರೂ ಉದ್ಘಾಟನೆಯ ಭಾಗ್ಯ ಸಿಗುತ್ತಿಲ್ಲ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈಗ ಮಹಾನಗರ ಪಾಲಿಕೆಯತ್ತ ಬೊಟ್ಟು ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಸುಪರ್ದಿಗೆ ಕಟ್ಟಡ ವರ್ಗಾವಣೆಗೊಂಡ ಕೂಡಲೇ ಉದ್ಘಟನೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ದಶಕಗಳ ಹೋರಾಟದ ಸಾಧಕ ಬಾಧಕ ನೋಡದ ಸರ್ಕಾರ: ಮಹದಾಯಿ ಸ್ವರೂಪ ಬದಲಾವಣೆ ಆರೋಪ..