ಹುಬ್ಬಳ್ಳಿ : ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ, ಶಿವಸೇನಾ, ಜೆಡಿಎಸ್ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಶತಾಯಗತಾಯ ಹೋರಾಟ ನಡೆಸುತ್ತಿವೆ. ಆದರೆ, ಬಿಜೆಪಿ ಪಕ್ಷ ಮಾತ್ರ ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ನಾಯಕರು ಹುಬ್ಬಳ್ಳಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆಗಿದೆ. ಆದರೆ, ಎಲ್ಲ ರಾಜಕೀಯ ನಾಯಕರ ದೃಷ್ಟಿ ಬಿದ್ದಿರುವುದು ಮಾತ್ರ ಅವಳಿನಗರದ ಚುನಾವಣೆ ಮೇಲೆ. ಆದ್ದರಿಂದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ನೇತೃತ್ವದಲ್ಲಿ ಬಿಜೆಪಿ ಸಾಕಷ್ಟು ಪ್ರಮಾಣದಲ್ಲಿ ತಯಾರಿ ನಡೆಸುತ್ತಿದೆ.
82 ವಾರ್ಡ್‌ಗಳಲ್ಲಿ 60ಕ್ಕೂ ಹೆಚ್ಚು ಸ್ಥಾನ ಗೆಲ್ಲುವು ವಿಶ್ವಾಸ
ಭಾರತೀಯ ಜನತಾ ಪಕ್ಷ 82 ವಾರ್ಡ್‌ಗಳಲ್ಲಿ ಈ ಬಾರಿಗೆ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉತ್ಸಾಹ ಹೊಂದಿದೆ. ಈಗಾಗಲೇ ಜನಾಶೀರ್ವಾದ ಯಾತ್ರೆ, ಪೂರ್ವಭಾವಿ ಸಭೆ ಮಾಡುವ ಮೂಲಕ ಪಾಲಿಕೆ ಚುನಾವಣೆಗೆ ಕಾರ್ಯತಂತ್ರ ರೂಪಸುತ್ತಿದೆ.
ಅಲ್ಲದೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ನೂತನ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ ಮಾಜಿ ಸಿಎಂ ಶೆಟ್ಟರ್ ಹಾಗೂ ಕೇಂದ್ರ ಸಚಿವ ಜೋಶಿಯವರು ಬಿಜೆಪಿ ಅಭಿವೃದ್ಧಿ ಕಾರ್ಯದ ಕುರಿತು ಮನವರಿಕೆ ಮಾಡುತ್ತಿದ್ದಾರೆ.
ಈಗಾಗಲೇ ಜನರು ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆದಿದ್ದಾರೆ
ನಗರದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹಾನಗರದಿಂದ ಮೆಗಾ ಸಿಟಿಯತ್ತ ಎನ್ನುವ ಪ್ರಯತ್ನ ಮಾಡಿದ್ದೇವೆ. ಅಭಿವೃದ್ಧಿಗಾಗಿ 120 ಕೋಟಿ ಹಣವನ್ನ ಕೇಳಿದ್ದೆವು.
ಆದರೆ, ಅವತ್ತು ಸಿದ್ದರಾಮಯ್ಯ ನಾನು ಬೆಂಗಳೂರಿಗೆ ಹೋಗಿ ₹120 ಕೋಟಿ ಅವರ ಮುಖಕ್ಕೆ ಎಸೆಯುತ್ತೇನೆ ಅಂತಾ ಹೇಳಿದ್ದರು. ಆದರೆ, ಜನ ಮಾತ್ರ ಅವರನ್ನೇ ಕಿತ್ತೆಸೆದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೆ, ಕಾಂಗ್ರೆಸ್ ಪಾರ್ಟಿ ಸತತವಾಗಿ ಸುಳ್ಳು ಹೇಳುತ್ತಾ ಬಂದಿದೆ. ಸಿಆರ್‌ಎಫ್ ಅನುದಾನದ ಬಗ್ಗೆ ಮಾತನಾಡಿದ್ದೇನೆ. ಇನ್ನೊಂದು 20 ದಿನಗಳ ಒಳಗಾಗಿ ಆ ಹಣವನ್ನ ತರಿಸುತ್ತೇವೆ. ಕಾಂಗ್ರೆಸ್‌ನವರು ರೈಲು ಬಿಟ್ಟರು ನಾವು ವಿಮಾನ ಹಾರಿಸಿದ್ದೇವೆ ಎಂದು ಹೇಳುತ್ತಾರೆ ಎಂದು ಜೋಶಿ ವ್ಯಂಗ್ಯವಾಡಿದರು.