ಹುಬ್ಬಳ್ಳಿ: ಉದ್ಯೋಗ ಅರಸಿ ಬಂದು ರಾತ್ರಿ ವೇಳೆಯಲ್ಲಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಸ್ಥಾನದಲ್ಲಿ ಮಲಗುತ್ತಿದ್ದ ಶ್ರಮಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.
ಪ್ರತಿನಿತ್ಯ ಸಾವಿರಾರು ಜನ ಹಳ್ಳಿಯಿಂದ, ಬೇರೆ ಬೇರೆ ಜಿಲ್ಲೆಗಳಿಂದ ಕೂಲಿ ಅರಸಿ ಪಟ್ಟಣಕ್ಕೆ ಬಂದು ಉದ್ಯೋಗ ಮಾಡುತ್ತಾರೆ. ಆದರೆ ಇವರಲ್ಲಿ ಕೆಲವರು ಮರಳಿ ತಮ್ಮ ಮನೆಗೆ ಹೋಗಲಾಗದೆ ಹಾಗೂ ಬಸ್ಗಳ ವ್ಯವಸ್ಥೆ ಇಲ್ಲದೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅಪಾರ್ಟ್ಮೆಂಟ್ ಕೆಳಗೆ, ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಾರೆ. ಹೀಗೆ ಸೂಕ್ತ ವಾಸಸ್ಥಾನವಿರದೆ ಪರದಾಡುವ ಶ್ರಮಿಕರಿಗೆ ಆಶ್ರಯ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಸತಿ ಆಶ್ರಯ ಕೇಂದ್ರವೊಂದನ್ನು ಆರಂಭಿಸುತ್ತಿದೆ.
ಇನ್ನು ಮುಂದೆ ಶ್ರಮಿಕ ವರ್ಗದವರು ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಕಳೆಯದೇ, ಈ ಆಶ್ರಯ ಕೇಂದ್ರದಲ್ಲಿ ಆಶ್ರಯ ಪಡೆಯಬಹುದಾಗಿದೆ. ಇದರ ಜೊತೆಗೆ ನಗರದಲ್ಲಿರುವ ಎಲ್ಲ ಶ್ರಮಿಕರ ಮಾಹಿತಿ ಸಂಗ್ರಹಕ್ಕೂ ಪಾಲಿಕೆ ಮುಂದಾಗಿದೆ.
ನಗರದ ಹೃದಯ ಭಾಗವಾಗಿರುವ ಹೊಸೂರ ರಸ್ತೆಯ ಸಾರ್ವಜನಿಕ ಗಣೇಶ ವಿಸರ್ಜನೆ ಸ್ಥಳದ ಪಕ್ಕದಲ್ಲಿರುವ ಪಾಲಿಕೆ ಜಾಗದಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾಲಿಕೆಯಿಂದ ಒಟ್ಟು 46 ಜನರಿಗೆ ಸಾಕಾಬಹುದಾದ ಆಶ್ರಯ ಕಟ್ಟಡವನ್ನು ಈಗಾಗಲೇ ನಿರ್ಮಾಣ ಮಾಡುತ್ತಿದೆ. ಕಟ್ಟಡ ಕಾಮಗಾರಿ ಈಗಾಗಲೇ ಶೇ 75 ರಷ್ಟು ಮುಕ್ತಾಯವಾಗಿದೆ.
ಆಶ್ರಯ ಕೇಂದ್ರ ನಿರ್ಮಾಣವಾಗುತ್ತಿರುವುದನ್ನು ಕಂಡ ಶ್ರಮಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬೇರೆ ಬೇರೆ ಊರುಗಳಿಂದ, ಜಿಲ್ಲೆಗಳಿಂದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಕೂಲಿ ಅರಸಿ ಬರುವ ಶ್ರಮಿಕರಿಗೆ ಮಹಾನಗರ ಪಾಲಿಕೆ ಆಶ್ರಯ ಕೊಡುತ್ತಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ.