ಹುಬ್ಬಳ್ಳಿ : ಮಹಾನಗರ ಪಾಲಿಕೆಯ ಸಾವಿರಾರು ಮಳಿಗೆಗಳನ್ನು ಲೀಜ್‌ಗೆ ಕೊಡಲಾಗಿದ್ದರೂ ಸರಿಯಾದ ಆದಾಯ ಬಂದಿಲ್ಲ. ಹೀಗಾಗಿ, ಆದಾಯದ ಮೂಲವಾಗಿರುವ ಪಾಲಿಕೆ ಮಳಿಗೆಗಳು ಇದ್ದೂ ಇಲ್ಲದಂತಾಗಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಅತಿ ದೊಡ್ಡ ಪಾಲಿಕೆಗಳಲ್ಲಿ ಒಂದು. ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆಗೆ ಸಾವಿರಾರು ವಾಣಿಜ್ಯ ಮಳಿಗೆಗಳೇ ಪ್ರಮುಖ ಆದಾಯದ ಮೂಲ. ಅವಳಿ ನಗರದಲ್ಲಿ 2,633 ಮಳಿಗೆಗಳನ್ನ ಪಾಲಿಕೆ ಬಾಡಿಗೆಗೆ ನೀಡಿದೆ. ಇದರಿಂದ ಪ್ರತಿ ವರ್ಷ ₹4 ಕೋಟಿಗೂ ಅಧಿಕ ಹಣ ಪಾಲಿಕೆಗೆ ಸಂದಾಯವಾಗಬೇಕು.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಎಲ್ಲಾ ಅಂಗಡಿಯವರು ಬಾಡಿಗೆ ಕಟ್ಟಬೇಕಿತ್ತು. ಆದರೆ, ಕೊರೊನಾ ಲಾಕ್ಡೌನ್ ಆಗಿದ್ದರಿಂದ ನಿರೀಕ್ಷಿತ ಬಾಡಿಗೆ ಹಣ ಸಂದಾಯವಾಗಿಲ್ಲ. ಕೊರೊನಾ ನಗರ ಪಾಲಿಕೆ ಆದಾಯದ ಮೇಲೂ ಹೊಡೆತ ಕೊಟ್ಟಿದೆ. 1972ರಲ್ಲಿ ಲೀಜ್ ಆಧಾರದ ಮೇಲೆ ಬಾಡಿಗೆ ಪಡೆದುಕೊಂಡವರೇ ಈಗಲೂ ಮಳಿಗೆಗಳಲ್ಲಿ ಮುಂದುವರಿದಿದ್ದಾರೆ. ಇಂದಿಗೂ ಎಲ್ಲಾ ಅಂಗಡಿಗಳ ಲೀಜ್ ಅವಧಿ ಮುಗಿದಿದ್ದರೂ, ಹೊಸದಾಗಿ ಮತ್ತೊಮ್ಮೆ ಟೆಂಡರ್ ಕರೆದಿಲ್ಲ ಎಂದು ಪಾಲಿಕೆ ಆಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪ್ರಭಾವಿ ರಾಜಕಾರಣಿಯ ಮೂಲಕ ವ್ಯಾಪಾರಸ್ಥರು ಟೆಂಡರ್ ಕರೆಯದಂತೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಅವಳಿನಗರದಲ್ಲಿ ಒಂದು ಮಳಿಗೆಗೆ ತಿಂಗಳಿಗೆ 20 ರಿಂದ 30 ಸಾವಿರ ರೂ. ಬಾಡಿಗೆ ಇದೆ. 1972ರ ದಶಕದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂಗಡಿಗಳನ್ನ ಲೀಜ್ ಹಾಕಿಕೊಂಡಿದ್ದವರು ಈಗಲೂ ಒಂದು ಮಳಿಗೆಗೆ ವರ್ಷಕ್ಕೆ 6 ರಿಂದ 7 ಸಾವಿರ ರೂ. ಬಾಡಿಗೆ ನೀಡುತ್ತಿದ್ದಾರೆ. ಅಲ್ಲದೆ ಲೀಜ್ ಪಡೆದುಕೊಂಡವರಲ್ಲಿ ಹಲವರು ಈ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿಲ್ಲ, ಮತ್ಯಾರಿಗೋ ಹೆಚ್ಚಿನ ಬಾಡಿಗೆಗೆ ಅಂಗಡಿಗಳನ್ನ ನೀಡಿ ಲಕ್ಷಾಂತರ ರೂ. ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಈ ಕುರಿತ ತನಿಖೆಗೆ ಒಂದು ತಂಡ ರಚಿಸಲಾಗಿತ್ತು. ಈ ತನಿಖಾ ತಂಡ ವರದಿ ನೀಡಿ ಐದಾರು ತಿಂಗಳುಗಳೇ ಕಳೆದಿದೆ. ಸಬ್ ಲೀಜ್ ನೀಡಿದ ಸುಮಾರು 156ಕ್ಕೂ ಹೆಚ್ಚು ಪ್ರಕರಣ ವರದಿಯಿಂದ ಬೆಳಕಿಗೆ ಬಂದಿವೆ.