ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಫಿಟ್ ಇಂಡಿಯಾ ಕಲ್ಪನೆಯನ್ನು ಸಕಾರಗೊಳಿಸಲು ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ₹100 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಧಾರವಾಡ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಪೂರ್ಣಗೊಂಡಿರುವ ಈಜುಕೊಳ, ಸ್ಮಾರ್ಟ್ ಹೆಲ್ತ್, ಸ್ಮಾರ್ಟ್ ಸ್ಕೂಲ್‌ಗಳ ಉದ್ಘಾಟನೆ ಹಾಗೂ ನೂತನ ಯೋಜನೆಗಳಾದ ಬೆಂಗೇರಿ ಮತ್ತು ಉಣಕಲ್ ಮಾರುಕಟ್ಟೆ ನಿರ್ಮಾಣ, ಬಹುವಾಹನ ನಿಲುಗಡೆ, ಸ್ಮಾರ್ಟ್ ರಸ್ತೆ ಕಾಮಗಾರಿ ಪ್ಯಾಕೇಜ್ 5 ಮತ್ತು 6, ಪುಟಾಣಿ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು.
ಈ ವೇಳೆ ಮಾತನಾಡಿದ ಅವರು, ದೇಶದ ಜನರ ಆರೋಗ್ಯ ಗುಣಮಟ್ಟದ ಮೇಲೆ, ದೇಶದ ಪ್ರಗತಿ ಅಳೆಯಲಾಗುತ್ತಿದೆ. ಉತ್ತಮ ಆರೋಗ್ಯ ಹೊಂದಿರುವ ಪ್ರಜೆಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡಬಲ್ಲವರಾಗಿದ್ದಾರೆ ಎಂದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೆಯ ಈಜುಕೊಳವನ್ನು ನವೀಕರಿಸಲಾಗಿದೆ. ಚಿಟುಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ ಹೆಲ್ತ್ ಆರಂಭಿಸಲಾಗಿದೆ. ಜನರ ಆರೋಗ್ಯ ತಪಾಸಣೆ ಹಾಗೂ ವರದಿಗಳನ್ನು ಕಂಪ್ಯೂಟರ್ ಆಧಾರಿತ ಕೃತಕ ಬುದ್ಧಿಮತ್ತೆಯಿಂದ ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕೇಂದ್ರ ರಸ್ತೆ ನಿಧಿಯಡಿ ಹುಬ್ಬಳ್ಳಿ-ಧಾರವಾಡ ಬಹುತೇಕ ರಸ್ತೆಗಳನ್ನು ದುರಸ್ತಿಗೊಳಿಸಲಾಗಿದೆ. ಪಾಲಿಕೆಯು ಕಸ ಹಾಗೂ ಧೂಳು ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಬೇಕು. ಬೀದಿ ದೀಪ ಹಾಗೂ ಕುಡಿಯುವ ನೀರಿನ ಸರಬರಾಜಿಗೂ ಒತ್ತು ನೀಡಬೇಕು ಎಂದು ಹೇಳಿದರು.
ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮೊದಲ ಹಂತದ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಆದಷ್ಟು ಬೇಗ BRTS ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದರು. ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಸ್ಥಗಿತಗೊಂಡಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಫೆಬ್ರವರಿ 14ರಂದು ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವಂತೆ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಉದ್ಯಮಿಗಳನ್ನು ಆಹ್ವಾನಿಸಲು ಮುಂಬಯಿಯಲ್ಲಿ ರೋಡ್ ಶೋ ಮಾಡಲಾಗಿದೆ. ಜನವರಿ 29ರಂದು ಹೈದರಾಬಾದ್ ನಗರದಲ್ಲೂ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ್, ಪ್ರದೀಪ ಶೆಟ್ಟರ್, ಹು-ಧಾ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಮಾಜಿ ಮಹಾಪೌರರುಗಳಾದ ಸುಧೀರ್ ಸರಾಫ್ ಹಾಗೂ ಚೌಹಾಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.