ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಖ್ಯಾತ ಹಿರಿಯ ಸಾಹಿತಿ ಚನ್ನವೀರ ಕಣವಿ ಮತದಾನ ಮಾಡಿದ್ದಾರೆ. ವಾರ್ಡ್ ನಂ 19 ರ ಮತಗಟ್ಟೆ 1 ರಲ್ಲಿ ವೋಟ್ ಹಾಕಿದರು. ತಮ್ಮ ಇಳಿವಯಸ್ಸಿನಲ್ಲೂ ಸರತಿಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ 11 ಗಂಟೆಗೆ ಶೇಕಡಾ 13 ರಷ್ಟು ಮತದಾನವಾಗಿದೆ.
ಕುಟುಂಬದೊಂದಿಗೆ ಬಂದು ಶೆಟ್ಟರ್ ವೋಟಿಂಗ್
ಹುಬ್ಬಳ್ಳಿಯ ಸೇವಾಸದನದ ಮತಗಟ್ಟೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಮತದಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. 82 ಸ್ಥಾನಗಳಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಟಿಕೆಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. 700 ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳಿದ್ದರು. ಕೆಲವು ಕಡೆ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ದ ಕ್ರಮಕೈಗೊಂಡಿದ್ದೇವೆ. ಬಂಡಾಯಗಾರರಿಗೆ ಜನರ ಬೆಂಬಲವಿಲ್ಲ ಎಂದರು.
ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ
ಬೇರೆ ಬೇರೆ ಸರ್ಕಾರವಿದ್ದಾಗಲೂ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಗೂಂಡಾಗಿರಿ ಮಾಡಿ ಒತ್ತಡ ಹಾಕಿದ್ರೂ ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಲ್ಲ ಎಂದರು.
ಅಭ್ಯರ್ಥಿಗಳಿಗೆ ಜೈಲಿನಿಂದ ಬೆದರಿಕೆ
ಕೆಲವು ಅಭ್ಯರ್ಥಿಗಳಿಗೆ ಜೈಲಿನಿಂದ ಬೆದರಿಕೆ ಬಂದಿವೆ. ಆ ಕುರಿತು ಯಾರು ದೂರು ನೀಡಿಲ್ಲ. ದೂರು ಬಂದರೆ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪಕ್ಷದ ನಿರ್ಧಾರದಂತೆ ಮುಂದುವರಿಯುತ್ತೇವೆ
ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ನಿರ್ಧಾರದಂತೆ ನಾವೂ ಮುಂದುವರೆಯುತ್ತೇವೆ. ಮುಂದಿನ ಚುನಾವಣೆ ಇನ್ನೂ ದೂರ ಇದೆ. ಹಿರಿಯರನ್ನು ಕಡೆಗಣಿಸಿದ ಬಗ್ಗೆ ನಾವೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡುತ್ತೇವೆ. ಬೊಮ್ಮಾಯಿ ಸರ್ಕಾರ ಬಂದು ಒಂದು ತಿಂಗಳಾಯ್ತು. ಒಂದು ತಿಂಗಳ ಅವಧಿಯಲ್ಲಿ ಪಾಸ್, ಫೇಲ್ ಅನ್ನೋಕಾಗಲ್ಲ. ಬೊಮ್ಮಾಯಿ ಅವರಿಗೆ ಅಮಿತ್ ಶಾ ಸರ್ಟಿಫಿಕೆಟ್ ಕೊಟ್ಟಿದ್ದು, ಸಂತಸದ ವಿಷಯ ಎಂದರು.
ಈ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆಯಿಲ್ಲ
ಈ ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಬ್ಯಾಲೆಟ್ ಯುನಿಟ್(ಬಿ.ಯು) ಮತ್ತು ಕಂಟ್ರೋಲ್ ಯುನಿಟ್(ಸಿಯು) ಗಳಿರುವ ಮತಯಂತ್ರಗಳನ್ನು ಮಾತ್ರ ಬಳಸಲಾಗುತ್ತಿದೆ. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಪೊಲೀಸರೊಂದಿಗೆ ಕೆಆರ್ಎಸ್ ಕಾರ್ಯಕರ್ತರ ವಾಗ್ವಾದ
ನಗರದ ಗೋಕುಲ್ ರಸ್ತೆಯ ವಾರ್ಡ್ ನಂಬರ್ 52 ರಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದರು. ಅಲ್ಲದೆ, ಮತಗಟ್ಟೆ ಬಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ: ಪುತ್ರಿಯರೊಂದಿಗೆ ಆಗಮಿಸಿ ಮತ ಚಲಾಯಿಸಿದ ಸಂಸದೆ ಮಂಗಳಾ ಅಂಗಡಿ