ಹುಬ್ಬಳ್ಳಿ: ಒಂದು ಕಡೆಗೆ ರೈಲು ಮತ್ತೊಂದು ಕಡೆಯಲ್ಲಿ ವಿಮಾನ ಎರಡೂ ಕೂಡ ಅವಳಿನಗರಕ್ಕೆ ವರವಾಗಿ ಪರಿಣಮಿಸಿದೆ. ಸಾಕಷ್ಟು ಜನಪರ ಕಾರ್ಯಗಳ ಹಾಗೂ ಹೊಸ ಹೊಸ ಯೋಜನೆಗಳ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಹುಬ್ಬಳ್ಳಿ ಏರ್‌ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ. ಅಲ್ಲದೇ ನೈಋತ್ಯ ರೈಲ್ವೆ ಕೂಡ ಪರಿಸರಸ್ನೇಹಿಯಾಗಿ ಹೊರಹೊಮ್ಮಿದೆ.
ಡಬ್ಲಿಂಗ್ ಹಾಗೂ ಎಲೆಕ್ಟ್ರಿಕಲ್ ಸೇವೆಯನ್ನು ವೃದ್ಧಿಸುವ ಮೂಲಕ ಕಾರ್ಯವೈಖರಿ ಚುರುಕುಗೊಳಿಸಿರುವ ನೈಋತ್ಯ ರೈಲ್ವೆ ಸೋಲಾರ್ ಪ್ಲಾಂಟ್ ಅನುಷ್ಠಾನ ಮಾಡಿ ಪರಿಸರಸ್ನೇಹಿಯಾಗಿದೆ. ಅಲ್ಲದೇ ಕೋಟ್ಯಂತರ ರೂಪಾಯಿ ವಿದ್ಯುತ್ ಹೊರೆ ತಗ್ಗಿಸಲು ಮುಂದಾಗಿದೆ. ಅಷ್ಟೇ ಅಲ್ಲದೇ ಹಸಿರು ವಿಮಾನ ನಿಲ್ದಾಣ ಎಂಬ ಸ್ಥಾನಮಾನ ಪಡೆದ ದೇಶದ ಕೆಲವೇ ಕೆಲ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಕೂಡ ಒಂದಾಗಿದ್ದು, ರಾಜ್ಯದಲ್ಲಿಯೇ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆಗಾ ವ್ಯಾಟ್ ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಸ್ಥಾವರದಿಂದಾಗಿ ಏರ್‌ಪೋರ್ಟ್ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ. ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ ಶೇ.50ರಷ್ಟು ಇಂಧನ ಉತ್ಪಾದಿಸುವ ಪ್ರಧಾನಿ ಮೋದಿ ಕನಸನ್ನು ನನಸಾಗಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣ ಮೊದಲ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಮುಂಬೈ ನಿಲ್ದಾಣಕ್ಕೆ ಬಂದ ತಿಮಿಂಗಿಲ ವಿಮಾನ.. ನೋಡಿದವರಿಗೆ ಅಚ್ಚರಿಯೋ ಅಚ್ಚರಿ!