ಹುಬ್ಬಳ್ಳಿ: ಸಾರ್ವಜನಿಕರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಸೆಟ್ಲ್‌ಮೆಂಟ್ ನಿವಾಸಿಗಳಾದ ಮಹೇಂದ್ರ ತೆಗ್ಗಿನಮನಿ ಹಾಗೂ ಆಂಜನೇಯ ಮಾಳವದೆ ಹಾಗೂ ಬಸವರಾಜ ನರಗುಂದ ಎಂಬುವರು ಬಂಧಿತ ಆರೋಪಿಗಳು. ಸಾರ್ವಜನಿಕರನ್ನು ಹೆದರಿಸಿ ಹಣ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದರು ಹಾಗೂ ಈ ಹಿಂದೆ ಬಿಡ್ನಾಳ ಲಕ್ಷ್ಮಿನಗರದಲ್ಲಿ ಬಸವಣ್ಣೆಪ್ಪ ಎಂಬುವರನ್ನು ತಡೆದು ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಈ ಬಗ್ಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹು-ಧಾ ನಗರ ಪೊಲೀಸ್ ಆಯುಕ್ತ ಆರ್ ದಿಲೀಪ್ ಅವರ ಮಾರ್ಗದರ್ಶನದ ಮೇರೆಗೆ ಆರೋಪಿಗಳನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಬೆಂಡಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.