ಹುಬ್ಬಳ್ಳಿ: ಸಾರ್ವಜನಿಕ ಹಿತ ಕಾಯ್ದು ನ್ಯಾಯ ಕೊಡಿಸಬೇಕಾದ ಮಹಾನಗರ ಪಾಲಿಕೆಯೇ ತ್ಯಾಜ್ಯ ವಿಲೇವಾರಿಯಿಂದ ಬಂದಿರುವ ರಾಸಾಯನಿಕಯುಕ್ತ ನೀರನ್ನು ರೈತರ ಹೊಲಕ್ಕೆ ಹರಿಸಿ, ರೈತರ ಬೆಳೆ ನಾಶವಾಗಲು ಕಾರಣೀಕರ್ತರಾಗಿದ್ದಾರೆ.
ಹುಬ್ಬಳ್ಳಿ ಹೊರವಲಯದಲ್ಲಿರುವ ಅಂಚಟಗೇರಿಯಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ, ತ್ಯಾಜ್ಯದ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದಿರುವುದರಿಂದ ಒಳಗೆ ಕೆರೆಯಂತಾಗಿದ್ದು, ರಾತ್ರೋರಾತ್ರಿ ಜೆಸಿಬಿಯಿಂದ ಕಾರ್ಯಾಚರಣೆ ನಡೆಸುವ ಮೂಲಕ ರೈತರ ಜಮೀನಿಗೆ ಈ ಕೊಳಚೆ ನೀರು ಬಿಟ್ಟ ಪರಿಣಾಮ ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ.
ಮಹಾನಗರ ಪಾಲಿಕೆಯ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿತನದಿಂದ ತೊಗರಿ, ಪೇರಲ ಗಿಡ, ರೇಷ್ಮೆ ಸೇರಿದಂತೆ ಇನ್ನಿತರ ಬೆಳೆಗಳು ಸುಟ್ಟು ಹೋಗಿದ್ದು, ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಮಹಾನಗರ ಪಾಲಿಕೆಯಿಂದಲೇ ರೈತರಿಗೆ ಇಂತಹದೊಂದು ಅನ್ಯಾಯವಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.