ಹುಬ್ಬಳ್ಳಿ: ಅವರೆಲ್ಲ ಹೊಸ ಕಂಪನಿ ನೆಚ್ಚಿಕೊಂಡು ಕೆಲಸಕ್ಕೆ ಸೇರಿದವರು. ಸ್ಟಾರ್ಟ್ ಅಪ್ ಮೂಲಕ ಹೊಸ ಜೀವನ ಕಟ್ಟಿಕೊಳ್ಳಲು ಬಂದವರು. ಆದರೆ, ನೆಚ್ಚಿಕೊಂಡ ಕೆಲಸ ಕೈಕಚ್ಚಿದೆ. ಬೇರೆ ಕಡೆ ಮಾಡುತ್ತಿದ್ದ ಕೆಲಸಕ್ಕೆ ಬಾಯ್ ಹೇಳಿ ಬಂದವರೂ ಇಲ್ಲಿ ಬಾಯಿ ಬಾಯಿ ಬಿಡುವಂತಾಗಿದೆ.
ಪೊಲೀಸ್ ಠಾಣೆ ಮುಂದೆ ಬಿಸಿಲಿನಲ್ಲಿ ಕಾಯುತ್ತಿರುವ ಯುವಕ-ಯುವತಿಯರೆಲ್ಲಾ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನವರು. ಹುಬ್ಬಳ್ಳಿಯಲ್ಲಿ ಇಂಡಿಯನ್ ಮನಿ ಡಾಟ್ ಕಾಮ್ ಕಂಪನಿಯೊಂದಕ್ಕೆ ಸೇರಿಕೊಂಡು ಕೆಲಸ ಮಾಡುತ್ತಿದ್ದರು.
ಆದರೆ, ತಿಂಗಳು ಕಳೆದರೂ ಕೂಡ ವೇತನ ಮಾತ್ರ ಸಿಕ್ಕಿಲ್ಲ. ಇದರಿಂದ ಬೇಸತ್ತ ಯುವಕ-ಯುವತಿಯರು ಇಂದು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮಗೆ ಸಂಬಳ ಕೊಡಿಸಿವಂತೆ ಮನವಿ ಮಾಡಿದ್ದಾರೆ.
ಎಕ್ರಂ ಇನ್ಪೋಟೆಕ್ ಪ್ರೈವೇಟ್ ಲಿಮಿಟೆಡ್ ಮೂಲಕ ನೇಮಕಗೊಂಡು, ಇಂಡಿಯನ್ ಮನಿ ಡಾಟ್ ಕಾಮ್ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 75-80 ಜನರು, ಒಂದು ಸಾವಿರ ರೂಪಾಯಿ ಕೊಟ್ಟು ನೇಮಕಾತಿ ಪ್ರಕ್ರಿಯೆ ಮುಗಿಸಿಕೊಂಡು ಕೆಲಸ ಮಾಡುತ್ತಿದ್ದರು.
ಆದರೆ, ದೀಪಾವಳಿ ಸಮೀಪಿಸುತ್ತಿದ್ದಂತೆ ಉದ್ಯೋಗಿಗಳು ವೇತನಕ್ಕೆ ಕರೆ ಮಾಡಿ ವಿಚಾರಿಸಿದಾಗ ವೇತನ ಕೊಡುವುದಿಲ್ಲ ಎಂದು ಸಬೂಬು ನೀಡಿದ್ದಾರೆ. ಇದರಿಂದ ಬೇಸತ್ತ ಯುವಕ-ಯುವತಿಯರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಭವಾನಿ ಆರ್ಕೆಡ್ ಹತ್ತಿರದ ಶಿರೂರ ಕಾಂಪ್ಲೆಕ್ಸ್ ನಲ್ಲಿರುವ ಕಛೇರಿಯಲ್ಲಿ ಸುಮಾರು 40-45 ದಿನಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ವೇತನ ಕೇಳಿದರೇ ವೇತನ ಕೊಡಲ್ಲ ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ಆಡಳಿತ ಮಂಡಳಿ ಬೇಕಾಬಿಟ್ಟಿ ಉತ್ತರ ನೀಡಿದ್ದಾರೆ.