ಧಾರವಾಡ : ಕೊರೊನಾ ಎರಡನೇ ಅಲೆ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಲಬ್, ಈಜುಗೋಳ, ಪಾರ್ಟಿಹಾಲ್ ಬಂದ್ ಮಾಡಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸುವ ಬಾರ್, ರೆಸ್ಟೋರೆಂಟ್, ಸಿನಿಮಾ ಟಾಕೀಸ್ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಮೊದಲ ಸಲ ದಂಡ, ಎರಡನೇ ಬಾರಿಗೆ ಉಲ್ಲಂಘಿಸಿದ್ರೆ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ದಂಡ ವಿಧಿಸಲು ಸೂಚನೆ, ಜನನಿಬಿಡ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಎಂದರು. ಈವರೆಗೆ ಒಂದು ಲಕ್ಷ 20 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. 45 ವಯಸ್ಸಿನ ನಂತರದವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ವೈರಸ್ ನಿಯಂತ್ರಣ ಮಾಡಬಹುದು.
ದಿನಂಪ್ರತಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲಾಡಳಿತದಿಂದ ಸರಣಿ ಸಭೆ ನಡೆಸಲಾಗುತ್ತಿದೆ ಎಂದರು. ಅನಗತ್ಯವಾಗಿ ಜನ ಸರ್ಕಾರಿ ಕಚೇರಿಗೆ ಬರುವುದು ಬೇಡ, ಮನೆ ಬಾಗಿಲಿಗೆ ಬಂದು ಸರ್ಕಾರ ಸೇವೆ ನೀಡಲಿದೆ. ಇದಕ್ಕಾಗಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ.. ಬೆಂಗಳೂರಲ್ಲಿ ಮತ್ತೆ 3 ಸಾವಿರ ಗಡಿ ದಾಟಿದ ಕೊರೊನಾ ವೈರಸ್ ಕೇಸ್