ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ಕಸರತ್ತು ಶುರುವಾಗಿದೆ. ಎರಡು ದಶಕಗಳ ಕಾಲ ಬಿಜೆಪಿ ತೆಕ್ಕೆಯಲ್ಲಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಲೆ ಇದೀಗ ಕಾಂಗ್ರೆಸ್ ಬಾವುಟ ಹಾರಿಸುವುದಕ್ಕೆ ಕೈ ರಣತಂತ್ರ ಮಾಡುತ್ತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹಾಲಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಪ ಮೇಯರ್ ಉಮಾ ಮುಕುಂದ ಅವರ 1 ವರ್ಷದ ಅವಧಿ ಇದೇ ಮೇ 26ಕ್ಕೆ ಪೂರ್ಣಗೊಳ್ಳಲಿದೆ. ಪ್ರತಿ ಬಾರಿ ಮೇಯರ್ - ಉಪ ಮೇಯರ್ ಯಾರಾಗಬೇಕು ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ನಿರ್ಧಾರ ಮಾಡುತ್ತಿದ್ದರು. ಇದೀಗ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಜೋಶಿ ಅವರ ಪಾತ್ರವೇ ನಿರ್ಣಾಯಕವಾಗಲಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ್ ಅವರಿಗೆ ಒಳಗೊಳಗೆ ಬೆಂಬಲ ನೀಡಿದ ಪಾಲಿಕೆ ಸದಸ್ಯರ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿದೆ. 82 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯಿಂದ 39 ಕಾಂಗ್ರೆಸ್‌ನಿಂದ 33, ಎಐಎಂಐಎಂನಿಂದ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರರು ಚುನಾಯಿತರಾಗಿದ್ದಾರೆ.
ಕಳೆದ ಬಾರಿ ಮೇಯರ್ - ಉಪ ಮೇಯರ್ ಆಯ್ಕೆ ಚುನಾವಣೆ ವೇಳೆ ಐವರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬರು ಬಿಜೆಪಿಗೆ ಮತ ಹಾಕಿದ್ದರು. ಓರ್ವ ಪಕ್ಷೇತರ ಸದಸ್ಯೆ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದರು. ಪಾಲಿಕೆಯ ಮೇಯರ-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತಾಧಿಕಾರ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಶತಾಯಗತಾಯ ಸರ್ಕಸ್ ನಡೆಸಿದೆ.
ಇನ್ನೂ ನೂತನ ಮೇಯರ್-ಉಪ ಮೇಯರ್ ಆಯ್ಕೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಸದ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ಮೀಸಲಾತಿಯ ಅನ್ವಯ ಬಿಜೆಪಿಯಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಬಾರಿ ಶತಾಯ ಗತಾಯ ಪಾಲಿಕೆಯ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ಕೈ ಪಡೆ ಶತ ಪ್ರಯತ್ನನಡೆಸಿರೋದು ಒಂದೆಡೆಯಾದರೆ ಅತ್ತ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರೋದು ಕೈಗೆ ಮತ್ತಷ್ಟು ಬಲ ತುಂಬಿದಂತಾಗಿದೆ. ಹೀಗಾಗಿ ಕೈ ಪಡೆ ಈಗಾಗಲೇ ಮೇಯರ್ ಹಾಗೂ ಉಪಮೇಯರ್ ಗಾದಿಗಾಗಿ ಸಾಕಷ್ಟು ಫೈಟ್ ನಡೆಸಿದ್ದು, ಕಾಂಗ್ರೆಸ್ ಈ ಶತಪ್ರಯತ್ನಕ್ಕೆ ಬಿಜೆಪಿಗರಲ್ಲಿ ನಡುಕ ಶುರುವಾಗಿದೆ.
ಎರಡು ದಶಕಗಳ ಕಾಲ ಬಿಜೆಪಿ ಬಾವುಟ ಹಾರಿಸಿದ್ದ ಪಾಲಿಕೆಯ ಮೇಲೆ ಈ ಬಾರಿ ಕಾಂಗ್ರೆಸ್ ತನ್ನ ಬಾವುಟ ಹಾರಿಸುವ ಮೂಲಕ ಪಾಲಿಕೆಯ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದೆ. ಆದರೆ ಕೈ ಪಾಳಯದ ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದು ಕಾದು ನೋಡಬೇಕು.
ಇದನ್ನೂಓದಿ:ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಪಲ್ಟಿಯಿಂದ ಅನಿಲ ಸೋರಿಕೆ ಆತಂಕ