ಹುಬ್ಬಳ್ಳಿ: ರಾಜ್ಯದಲ್ಲಿ ಪ್ರಸ್ತುತವಾಗಿ ಶೇ 45 ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ 12 ಕ್ಕೆ ಇಳಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ 900 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೇಮಕಾತಿಯಲ್ಲಿ ಶೇ 20ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದರು.
ಇನ್ನು, ಪೊಲೀಸ್ ಇಲಾಖೆಗೆ ಈ ವರ್ಷ ಸವಾಲಿನದ್ದಾಗಿದ್ದು, ಹುಬ್ಬಳ್ಳಿ ಗಲಭೆಯನ್ನು ಇಲ್ಲಿನ ಪೊಲೀಸ್ ಆಯುಕ್ತ ಲಾಬೂರಾಮ್ ಅವರ ನೇತೃತ್ವದ ತಂಡ ಅತ್ಯಂತ ಯಶಸ್ವಿಯಾಗಿ ಹಾಗೂ ಕ್ಷಿಪ್ರವಾಗಿ ತಹಬದಿಗೆ ತರುವ ಮೂಲಕ ಹುಬ್ಬಳ್ಳಿಯ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು ಅನುಕರಣೀಯ ಸಂಗತಿಯಾಗಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ವರ್ಷಕ್ಕೆ 2 ರಿಂದ 3 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು. ಇದೀಗ ವಾರ್ಷಿಕ 100ಕ್ಕೂ ಹೆಚ್ಚು ಠಾಣೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೃಹ ಸಚಿವರು ಹರ್ಷ ವ್ಯಕ್ತಪಡಿಸಿದರು.
ಓದಿ: ಬಿಜೆಪಿ ಸರ್ಕಾರ ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಮಾಡುತ್ತಿದೆ: ಡಿ ಕೆ ಶಿವಕುಮಾರ್