ಧಾರವಾಡ : ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆ ಅವರ ನಿವಾಸಕ್ಕೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧಿಸಿರೋದು ರಾಜಕೀಯ ಒತ್ತಡ ಹೇರುವ ಕ್ರಮ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂಥ ಘಟನೆಗಳು ನಡೆದಿವೆ. ಇದು ಅತ್ಯಂತ ನೋವು ನೀಡೋ-ಖಂಡನೀಯ ವಿಷಯ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ. ಇದನ್ನು ಹಲವಾರು ಕಡೆ ನೋಡಿದ್ದೇವೆ, ಇದನ್ನು ದೇಶವೇ ಗಮನಿಸುತ್ತಿದೆ. ರಾಜಕೀಯದಲ್ಲಿ ಭಯ ಹುಟ್ಟಿಸೋ ಕೆಲಸ ಮಾಡಬಾರದು, ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಅದನ್ನು ಅಶಕ್ತಗೊಳಿಸೋ ಕೆಲಸ ಮಾಡಬಾರದು.
ಕಾನೂನಿನ ಮುಂದೆ ಎಲ್ಲರೂ ಸಮಾನರೇ ಆದರೆ, ಅನ್ಯಾಯವಾಗಿ ಯಾರಿಗೂ ತೊಂದರೆ ಕೊಡಬಾರದು. ಈ ಪರಿಪಾಠ ಸಂವಿಧಾನದಲ್ಲಿಯೇ ಇದೆ. ಬಿಜೆಪಿಯ ಕ್ರಮವನ್ನು ಯಾರೂ ಮೆಚ್ಚೋದಿಲ್ಲ ಎಂದರು.