ಹುಬ್ಬಳ್ಳಿ: ಕೇಂದ್ರ ಸರ್ಕಾರದ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸುಮಾರು ವರ್ಷಗಳ ನಿರೀಕ್ಷಿತ ರೈಲ್ವೆ ಯೋಜನೆಗಳು ಕೇಂದ್ರ ಸರ್ಕಾರದ ಬಜೆಟ್ ಮೇಲೆ ನಿರ್ಧಾರವಾಗಲಿವೆ ಎಂಬ ಆಶಾದಾಯಕ ಭಾವನೆಯನ್ನು ರಾಜ್ಯದ ಜನರು ಇಟ್ಟಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ಸಿಗುವ ಆಸೆಗಳನ್ನು ಈ ಭಾಗದ ಜನರು ಇಟ್ಟುಕೊಂಡಿದ್ದಾರೆ.
ಈ ಬಾರಿ ಕೇಂದ್ರ ಬಜೆಟ್ ಉತ್ತರ ಕರ್ನಾಟಕ ಭಾಗದ ಹಾಗೂ ರಾಜ್ಯದ ಮಹತ್ವಪೂರ್ಣ ರೈಲ್ವೆ ಯೋಜನೆಯಲ್ಲಿ ಒಂದಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಕಾಮಗಾರಿ ವೇಗ ಪಡೆಯಲಿದೆ ಎಂಬ ಆಶಾಭಾವನೆ ಇದೆ. 1996ರಲ್ಲಿಯೇ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದ್ದರೂ ಕೂಡ ಇದುವರೆಗೆ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಈ ಬಾರಿ ಬಜೆಟ್ ಈ ಕನಸನ್ನು ಸಾಕಾರಗೊಳಿಸಲಿದೆಯೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ಈ ಬಾರಿ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಇನ್ನೂ ನೈಋತ್ಯ ರೈಲ್ವೆ ವಲಯದಲ್ಲಿ ಹತ್ತು ಹಲವಾರು ಯೋಜನೆಗಳಿಗೆ ಕೇಂದ್ರ ಬಜೆಟ್ ವರವಾಗಬೇಕಿದೆ. ಬಹುನಿರೀಕ್ಷಿತ ಯೋಜನೆಯಾಗಿರುವ ಗದಗ - ವಾಡಿ, ಗದಗ-ಯಲವಿಗಿ, ಮುನಿರಾಬಾದ್- ಮೆಹಬೂಬನಗರ ಹೊಸ ಮಾರ್ಗದ ಯೋಜನೆಗೆ ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕೈಗೆತ್ತಿಕೊಳ್ಳಬೇಕು. ಇದರಿಂದ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ಹಿಂದೆಯಷ್ಟೇ ಕೇಂದ್ರ ರೈಲ್ವೆ ಸಚಿವರು ಸೂಚನೆ ನೀಡಿದ್ದ ಗದಗವಾಡಿ ಗದಗ - ಯಲವಿಗಿ ರೈಲ್ವೆ ಹೊಸ ಮಾರ್ಗದ ಕಾರ್ಯವನ್ನು ಈ ಬಾರಿ ಬಜೆಟ್ ಪೂರಕವಾಗಿ ಪ್ರೋತ್ಸಾಹಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ. ಅಲ್ಲದೇ ಧಾರವಾಡ ಬೆಳಗಾವಿ ಹೊಸ ಲೈನ್ ಗೆ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟು ಯೋಜನೆ ಜಾರಿ ಮಾಡಬೇಕಿದೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರ ಕನಸಿನ ಯೋಜನೆಯಾಗಿದ್ದು ಇದನ್ನು ಕೈಗೆತ್ತಿಕೊಳ್ಳಬೇಕು. ಇದು ವಾಣಿಜ್ಯ ಸರಕು ಸಾಗಾಣಿಕೆಗೆ ಸಾಕಷ್ಟು ಅನುಕೂಲಕರವಾಗಲಿದೆ.
ಇನ್ನೂ ಹೊಸದಾಗಿ ಗದಗ - ಕುಡಚಿ, ಅಣ್ಣಿಗೇರಿ - ಯಲ್ಲಮ್ಮನ ಗುಡ್ಡ ರೈಲು ಮಾರ್ಗಗಳು, ತುಮಕೂರು, ಚಿತ್ರದುರ್ಗ, ದಾವಣಗೆರೆ ಲೈನ್ ಅಭಿವೃದ್ಧಿ ಕಾರ್ಯಗಳು ಕೂಡ ಈ ಬಾರಿ ಬಜೆಟ್ ನಿರೀಕ್ಷೆಯಲ್ಲಿವೆ. ಜೊತೆಗೆ ಸಾಕಷ್ಟು ಜನಪರ ಯೋಜನೆಗಳು ರೈಲ್ವೆ ವಲಯದಲ್ಲಿ ಬಜೆಟ್ ಗಾಗಿ ಕಾಯುತ್ತಿದ್ದು, ಮಂಗಳೂರು ಹಾಗೂ ಕಲಬುರಗಿ ರೈಲ್ವೆ ವಿಭಾಗಗಳನ್ನಾಗಿ ಮಾರ್ಪಾಡು ಪ್ರಸ್ತಾವನೆ ಇದೆ. ಇದರ ಜೊತೆಗೆ ಹುಬ್ಬಳ್ಳಿಯಿಂದ ನೇರ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ - ಮಧುರೈ ಹಾಗೂ ಹುಬ್ಬಳ್ಳಿ - ವಾರಣಾಸಿ ನೇರ ರೈಲು ಸಂಪರ್ಕಕ್ಕೆ ಹೊಸ ರೈಲುಗಳ ನಿರೀಕ್ಷೆ ಇದೆ. ಒಟ್ಟಿನಲ್ಲಿ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನೈಋತ್ಯ ರೈಲ್ವೆ ವಲಯದ ಯೋಜನೆಗಳ ಬಗ್ಗೆ ಮುತುವರ್ಜಿ ವಹಿಸಿ ಹೆಚ್ಚಿನ ಆದ್ಯತೆ ನೀಡಬೇಕಿದೆ.