ಹುಬ್ಬಳ್ಳಿ: ನಿರಂತರ ಸುರಿದ ಮಳೆಗೆ ಗುಡೇನಕಟ್ಟಿ ಗ್ರಾಮ ಜಲಾವೃತಗೊಂಡಿದ್ದು, ಜನ ಪರದಾಡುವಂತಾಗಿದೆ. ಕುಂದಗೋಳ ತಾಲೂಕಿನಲ್ಲಿ ಮೊದಲೇ ಬೆಣ್ಣೆಹಳ್ಳ, ಸೀಮೆಹಳ್ಳ ತುಂಬಿ ಹರಿಯುತ್ತಿದ್ದು, ಅದರಂತೆ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿನ ಜೈನ್ ಮಂದಿರದ ಓಣಿ ಕೂಡಾ ಸಂಪೂರ್ಣ ಜಲಾವೃತಗೊಂಡಿದೆ.
ಮನೆಗಳ ಸುತ್ತ ನೀರು ನಿಂತಿದ್ದು, ಕುಸಿಯುವ ಭೀತಿ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ, ಕುಂದಗೋಳ ತಾಲೂಕಿನ ತಹಶೀಲ್ದಾರ್, ನೋಡಲ್ ಅಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಹೀಗಾಗಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕು. ನಿಂತ ನೀರನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು. ಅಲ್ಲದೇ ತಾಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ವ್ಯವಸಾಯ ಭೂಮಿಗಳ ಒಡ್ಡು ಒಡೆದು ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ. ಕೂಡಲೇ ಅತಿವೃಷ್ಟಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.