ಹುಬ್ಬಳ್ಳಿ: ನಗರಗಳು ಬೆಳೆದಂತೆ ಒಂದಿಷ್ಟು ಸಮಸ್ಯೆಗಳು ಉದ್ಭವಿಸುತ್ತದೆ. ಎಲ್ಲವನ್ನೂ ಸಮತೋಲನದಲ್ಲಿರಿಸುವುದು ಸ್ಥಳೀಯ ಸರ್ಕಾರಳಿಗೆ ದೊಡ್ಡ ಸವಾಲಿದ್ದಂತೆ. ಅದರಲ್ಲೂ ಶಬ್ಧ ಮಾಲಿನ್ಯ ಹುಬ್ಬಳ್ಳಿ ಜನತೆಯ ನಿದ್ದೆಗೆಡಿಸಿದೆ.
ವಾಣಿಜ್ಯ ನಗರದಲ್ಲಿ ವಾಹನಗಳ ದಟ್ಟಣೆ, ಅತಿಯಾಗಿ ಹಾರ್ನ್ ಹಾಕುವುದು, ಬೈಕ್ಗಳ ಕರ್ಕಶ ಶಬ್ಧ, ಕಾರ್ಖಾನೆಗಳ ಶಬ್ಧಗಳು ಮನುಷ್ಯನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ. ಮಹಾನಗರದ ಜನತೆಯನ್ನು ಸಂಚಾರ ಸಮಸ್ಯೆ ಜೊತೆಗೆ ವಾಹನಗಳ ಕರ್ಕಶ ಶಬ್ಧ ಮಾಲಿನ್ಯ ಎಡ ಬಿಡದೆ ಕಾಡುತ್ತಿದೆ. ನಗರದ ಯಾವುದೇ ರಸ್ತೆಗೆ ತೆರಳಿದರೂ ಕರ್ಕಶ ಶಬ್ಧ ಸಾಮಾನ್ಯವಾಗಿದೆ. ದ್ವಿಚಕ್ರ, ಮೂರು, ನಾಲ್ಕು ಚಕ್ರದ ವಾಹನಗಳಲ್ಲಿ ಸಂಚರಿಸುವ ಅನೇಕ ಸವಾರರು ಕಾರಣವಿಲ್ಲದೇ ಹಾರ್ನ್ ಹಾಕುತ್ತಾ ಶಬ್ಧ ಮಾಲಿನ್ಯ ಸೃಷ್ಟಿಸುತ್ತಿದ್ದಾರೆ.
ಜಾಗೃತಿ ಕಾರ್ಯಕ್ರಮ:
ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ:
ಶಬ್ಧ ಮಾಲಿನ್ಯದಿಂದ ಹೆಚ್ಚಿನ ತೊಂದರೆ ಅನುಭವಿಸುವುದೇ ಪುಟಾಣಿ ಮಕ್ಕಳು. ಅನಗತ್ಯ ಶಬ್ಧದ ಕಿರಿಕಿರಿಯಿಂದ ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ದೊಡ್ಡವರು ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ. ಶಬ್ಧ ಮಾಲಿನ್ಯದಿಂದಾಗಿ ಕಿವುಡುತನ, ಅತಿಯಾದ ಮಾನಸಿಕ ಒತ್ತಡ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ನಿದ್ರಾಹೀನತೆ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಲಿವೆ ಎಂದು ಖ್ಯಾತ ಆರ್ಡಿಯಾಲಜಿಸ್ಟ್ ರಮ್ಯಾ ರೆವಿ ಅಭಿಪ್ರಾಯಪಟ್ಟಿದ್ದಾರೆ.
ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯ
ನಿಗದಿತ ಶಬ್ಧದ ಪ್ರಮಾಣ 65.0 ಡೆಸಿಬೆಲ್ ಇರಬೇಕು. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಶಬ್ಧ ಅಪಾಯಕಾರಿಯಾಗಿದೆ. ಶಬ್ಧ ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರ ಸಹಭಾಗಿತ್ವದೊಂದಿಗೆ ಮಾತ್ರ ಈ ಸಮಸ್ಯೆ ನಿಯಂತ್ರಣ ಸಾಧ್ಯ. ವಿಶೇಷವಾಗಿ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿ ಇದು ಪ್ರಯೋಜನವಾಗಲಿದೆ.
ಓದಿ: ಬೆಂಗಳೂರಿನ ಶಬ್ದ ಮಾಲಿನ್ಯ ಗಣನೀಯ ಏರಿಕೆ; ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ!
ಇನ್ನೂ ಸರ್ಕಾರ ಕೂಡ ಶಬ್ಧಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕಿದೆ.