ಹುಬ್ಬಳ್ಳಿ: ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಮೇ ತಿಂಗಳಿನವರೆಗೆ ಸರ್ಕಾರವನ್ನು ದೂಡಿಕೊಂಡು ಹೋಗುವುದು ಸರಿಯಲ್ಲ. ಜನವರಿಯಲ್ಲಿ ರಾಜ್ಯದ ಚುನಾವಣೆ ನಡೆಯಬೇಕು. ಇದು ಉತ್ತಮ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ ನಾಯಕರ ಚಿಂತನ - ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷ ಸಂಘಟನೆ ಹಾಗೂ ಪಂಚರತ್ನ ಕಾರ್ಯಕ್ರಮದ ರೂಪರೇಷೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಜನವರಿ ತಿಂಗಳಲ್ಲಿ ಪಂಚರತ್ನ ಕಾರ್ಯಕ್ರಮ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಇದಲ್ಲದೇ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದ್ದಾರೆ ಎಂದರು.
ಕುಮಾರಸ್ವಾಮಿಯೇ ನಮ್ಮ ಮುಖ್ಯಮಂತ್ರಿ: ಬೊಮ್ಮಾಯಿ ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಕೇಶವ ಕೃಪಾದಲ್ಲಿ ಏನ್ ಹೇಳುತ್ತಾರೋ ಅದರಂತೆ ಮಾಡುತ್ತಾರೆ. ಬಿಜೆಪಿಗೆ 60 ರಿಂದ 65 ಸೀಟ್ ಬರಲ್ಲ. ನಾನು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಹೇಳುತ್ತೇನೆ, ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ. ಮುಸ್ಲಿಂ, ದಲಿತ ಸಿಎಂ ಮಾಡಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆ. ಆದರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಹೇಳುವ ಮೂಲಕ ದಲಿತ, ಮುಸ್ಲಿಂ ಸಿಎಂ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸೆಂಬರ್ ಕೊನೆಯಲ್ಲಿ ಬಿಗ್ ಸರ್ಪ್ರೈಸ್: ದಲಿತ, ಮುಸ್ಲಿಂ ಉಪಮುಖ್ಯಮಂತ್ರಿ ಮಾಡುತ್ತೇವೆ. ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದರೆ ಜೆಡಿಎಸ್ನಲ್ಲಿ ದಲಿತ, ಮುಸ್ಲಿಂ ಸಿಎಂ ಅವಕಾಶ. ಕುಮಾರಸ್ವಾಮಿ ಗೃಹಬಲ ನೋಡಿದರೆ ಅವರು ಕೇಂದ್ರಕ್ಕೆ ಹೋಗುತ್ತಾರೆ. ಡಿಸೆಂಬರ್ 18 ರ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಬಿಗ್ ಸರ್ಪ್ರೈಸ್ ಸಿಗಲಿದೆ. ಹಾಲಿ ಶಾಸಕರು, ಮಾಜಿ ಶಾಸಕರು ಜೆಡಿಎಸ್ಗೆ ಬರಲಿದ್ದಾರೆ. ಕೆಲ ಜಿಲ್ಲೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮುಕ್ತ ಜಿಲ್ಲೆಗಳಾಗಿವೆ. ರಮೇಶ್ ಜಾರಕಿಹೊಳಿ ಜೊತೆ ಕುಮಾರಸ್ವಾಮಿ ಮಾತಾಡಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಎಷ್ಟ ಜನ ಬರ್ತಾರೆ ಅನ್ನೋದು ಕುಮಾರಸ್ವಾಮಿ ಅವರಿಗೆ ಗೊತ್ತು ಎಂದರು.
ಗೋ ಹತ್ಯೆಯಿಂದ ರೈತರ ಆತ್ಮಹತ್ಯೆ: ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಮಾತನಾಡಿ, ಇದು ವೋಟ್ಗಾಗಿ ಮಾಡುತ್ತಿರುವುದು. ಗೋವಾದಲ್ಲಿ ಯಾಕೆ ಗೋ ಹತ್ಯೆ ನಿಷೇಧ ಇಲ್ಲ. ಕರ್ನಾಟಕದಲ್ಲಿ ಯಾಕೆ ಗೋ ಹತ್ಯೆ. ಕರ್ನಾಟಕದಲ್ಲಿ ಏನ್ ಬೇಕಾದರೂ ಗೂಂಡಾಗಿರಿ ಮಾಡಬಹುದು ಅನ್ನೋ ಕಾರಣಕ್ಕೆ ನಿಷೇಧ ಮಾಡಿದೀರಾ ಎಂದು ಪ್ರಶ್ನೆ ಮಾಡಿ, ಗೋ ಹತ್ಯೆ ಕಾನೂನು ತಂದ ಮೇಲೆ ರೈತರ ಆತ್ಮಹತ್ಯೆಯಾಗುತ್ತಿದೆ. ಮುಸ್ಲಿಂ ವ್ಯಾಪಾರಿಗಳು ಐದು ತಿಂಗಳು ತಡೆದುಕೊಳ್ಳಿ. ನಂತರ ಈ ದರಿದ್ರಗಳು ಹೋಗುತ್ತವೆ ಎಂದು ಪರೋಕ್ಷವಾಗಿ ಬಿಜೆಪಿಗರನ್ನು ದರಿದ್ರ ಎಂದು ದೂರಿದರು.
ಇದನ್ನೂ ಓದಿ: ಬೆತ್ತನಗೆರೆ ಶಂಕರ ಯಾರೆಂದು ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ