ಧಾರವಾಡ: ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಧಾರವಾಡ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿತ್ತು. ಇದರ ಮಧ್ಯೆ ಧಾರವಾಡ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದರು. ಕರ್ತವ್ಯ ಪ್ರಜ್ಞೆ ಮೆರೆದಿರುವುದರ ಜೊತೆಗೆ ಮುಷ್ಕರಕ್ಕೂ ಬೆಂಬಲ ಸೂಚಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ರೋಗಿಗಳಿಗೆ ಅನಾನುಕೂಲವಾಗಬಾರದು ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಧಾರವಾಡ ಜಿಲ್ಲಾ ಆಸ್ಪತ್ರೆಯ ಓಪಿಡಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ಡಯಾಲಿಸಿಸ್, ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್ ಸೇರಿದಂತೆ ಅನೇಕ ವಾರ್ಡ್ಗಳಲ್ಲಿ ಸರ್ಕಾರಿ ನೌಕರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆ ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರಕ್ಕೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಹಾಜರಾಗದೇ ಮುಷ್ಕರ ನಡೆಸಿದ್ದಾರೆ.
ಧಾರವಾಡದ ಎಲ್ಲಾ ಸರ್ಕಾರಿ ಕಚೇರಿಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ. ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಕೂಡ ನೌಕರರಿಲ್ಲದೆ ಬಿಕೋ ಎನ್ನುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ವಿಭಾಗಗಳ ನೌಕರರು ತಮ್ಮ ಕಚೇರಿಗೆ ಬೀಗ ಹಾಕಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಗೇಟ್ ಒಂದು ತೆರೆದಿದ್ದು ಹೊರತುಪಡಿಸಿದರೆ ಉಳಿದೆಲ್ಲ ವಿಭಾಗಗಳು ಸಂಪೂರ್ಣ ಬಂದ್ ಆಗಿ ಕಚೇರಿ ಬಿಕೋ ಎನ್ನುತ್ತಿದ್ದವು.
ಸರ್ಕಾರಿ ನೌಕರರ ಪ್ರತಿಭಟನೆ ಹಿನ್ನೆಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ: ಏಳನೇ ಪರಿಷ್ಕೃತ ವೇತನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡಿದರು. ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಸರ್ಕಾರಿ ನೌಕರರು ಸೇವೆಯಿಂದ ದೂರ ಉಳಿದಿದ್ದರಿಂದ ಗುತ್ತಿಗೆ ಆಧಾರದ ಸಿಬ್ಬಂದಿಯಿಂದ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಓಪಿಡಿ ಸೇವೆಯನ್ನು ನೀಡಲಾಗುತ್ತಿದೆ.
ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಕಿಮ್ಸ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕ ಮಾತ್ರ ಓಪನ್ ಆಗಿದ್ದು, ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲ ಸಿಬ್ಬಂದಿ ತುರ್ತು ಸೇವೆ ನೀಡುತ್ತಿದ್ದಾರೆ. ಇದರಿಂದ ಕಿಮ್ಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ನೌಕರರ ಕೊರತೆ ಕಂಡುಬಂತು.
ಗದಗದಲ್ಲಿ ರೋಗಿಗಳ ಬೇಸರ: ಮುಷ್ಕರದ ಬಗ್ಗೆ ಗೊತ್ತಿರದ ನೂರಾರು ರೋಗಿಗಳು ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಬಂದಿದ್ದು, ವೈದ್ಯರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಪಿಡಿ ವಿಭಾಗದಲ್ಲಿ ಚೀಟಿ ಮಾಡುತ್ತಿಲ್ಲ. ಮುಷ್ಕರದ ಬಗ್ಗೆ ಗೊತ್ತಿರದ ನೂರಾರು ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ಹೀಗೆ ಇದ್ದಕ್ಕಿದ್ದಂತೆ ಚೀಟಿ ಮಾಡುವುದಿಲ್ಲವೆಂದು ಹೇಳಿದರೆ ಅವರು ಎಲ್ಲಿಗೆ ಹೋಗಬೇಕು ಎಂದು ಬೆಳ್ಳಟ್ಟಿಯಿಂದ ಬಂದ ರೋಗಿ ಅನಿಲ್ ಕುಮಾರ್ ಎಂಬ ಯುವಕ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮುಷ್ಕರ ಇರುವ ಬಗ್ಗೆ ನಮಗೆ ಗೊತ್ತಿಲ್ಲ. ದಿಢೀರ್ ಮುಷ್ಕರದಿಂದಾಗಿ ದೂರದಿಂದ ಬಂದಿರುವ ನಮಗೆ ಕಷ್ಟವಾಗುತ್ತಿದೆ ಎಂದರು.
ಬೆಂಗಳೂರು: ಮುಷ್ಕರ ಹಿನ್ನೆಲೆ ಶಕ್ತಿಸೌಧ, ವಿಧಾನಸೌಧ ಹಾಗೂ ವಿಕಾಸಸೌಧ ಕೂಡ ಬಿಕೋ ಎನ್ನುತ್ತಿದ್ದವು. ವಿಧಾನಸೌಧದಲ್ಲಿ ಇಂದು ಬೆಳಗ್ಗೆ 10ಕ್ಕೆ ಕೆಲಸ ಆರಂಭವಾಗಬೇಕಿತ್ತು. ಆದರೆ, ಯಾವೊಬ್ಬ ನೌಕರರು ಕೆಲಸಕ್ಕೆ ಹಾಜರಾಗಿರಲಿಲ್ಲ. ಹೊರಗುತ್ತಿಗೆ ನೌಕರರು ಕೆಲಸಕ್ಕೆ ಆಗಮಿಸಿದ್ದರೂ, ಅವರನ್ನು ವಾಪಸ್ ಕಳುಹಿಸಲಾಯಿತು. ವಿಧಾನಸೌಧದಲ್ಲಿರುವ ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಇನ್ನು ಪೊಲೀಸರು ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಬಿಗಿ ಭದ್ರತೆ ಕೈಗೊಂಡಿದ್ದರು.
ದಾವಣಗೆರೆ: ಇಂದು ಬೆಳಗ್ಗೆಯಿಂದಲೇ ಮುಷ್ಕರ ಮಾಡುತ್ತಿರುವ ಸರ್ಕಾರಿ ನೌಕರರು, ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಮಾಡಿ ಸರ್ಕಾರದ ವಿರುದ್ಧ ತಮ್ಮ ಬೇಡಿಕೆಗಳು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಕೆಲ ತುರ್ತು ಸೇವೆಗಳನ್ನು ನಿರ್ವಹಿಸುವ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೇವೆಗೆ ಹಾಜರಾಗಿದ್ದರು.
ಪಾಲಿಕೆ ಹಾಗು ಜಿಲ್ಲಾಸ್ಪತ್ರೆ ಒಪಿಡಿ ಸ್ತಬ್ಧ- ರೋಗಿಗಳ ಪರದಾಟ: ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವಂತೆ ಪಾಲಿಕೆ ಹಾಗು ಜಿಲ್ಲಾಸ್ಪತ್ರೆ ಸಿಬ್ಬಂದಿ ಕೂಡ ಮುಷ್ಕರ ನಡೆಸಿದರು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರೋಗಿಗಳು ಮನೆಯತ್ತ ಹೆಜ್ಜೆ ಹಾಕಿದರು. ಇನ್ನು ಕೆಲವರು ಸರ್ಕಾರಿ ನೌಕರರಿಗೆ ಹಿಡಿಶಾಪ ಹಾಕಿದ್ರು.
ಬೆಂಗಳೂರು: ಸರ್ಕಾರಿ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕೆ ಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ಕೂಡ ಆಸ್ಪತ್ರೆಯ ಓಪಿಡಿ ವಿಭಾಗವನ್ನು ಮುಚ್ಚಿದ್ದರು. ತುರ್ತು ಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ: ಶೇ.17 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ