ಹುಬ್ಬಳ್ಳಿ: ಖಾಸಗಿ ವಾಹನಕ್ಕೆ ಕರ್ನಾಟಕ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡು ಅಧಿಕಾರಿಯೊಬ್ಬರು ಹೋಗುತ್ತಿರುವ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ತಡೆದು ತೆರವುಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ಅವಕಾಶ ಮಾಡಿಕೊಟ್ಟಿದೆ. ಆದರೂ ಕೆಲವರು ತಮ್ಮ ಖಾಸಗಿ ವಾಹನಗಳಿಗೆ ನೋಂದಣಿ ಫಲಕಗಳ ಮೇಲೆ ಸಂಘ ಸಂಸ್ಥೆಗಳ ಹೆಸರನ್ನು ಅಳವಡಿಸಿಕೊಂಡು ಓಡಾಟ ನಡೆಸಿದ್ದರು.
ನಗರದ ಚೆನ್ನಮ್ಮ ಸರ್ಕಲ್‌ದಲ್ಲಿ ಕೇಶ್ವಾಪುರ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ.ಕಾಡದೇವರಮಠ ವಾಹನಗಳ ತಪಾಸಣೆಗೆ ಮುಂದಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಎಂಬ ಬೋರ್ಡ್‌ನ್ನು ವಾಹನಗಳ ನೋಂದಣಿ ಫಲಕಗಳ ಮೇಲೆ ಅಳವಡಿಸಿರುವುದು ಕಂಡುಬಂದಿದೆ. ಈ ವಾಹನಗಳನ್ನು ತಪಾಸಣೆ ಮಾಡಿದ ಪೋಲಿಸರು, ಸ್ಥಳದಲ್ಲಿಯೇ ಫಲಕಗಳನ್ನು ತೆರವುಗೊಳಿಸಿ ತಿಳಿಹೇಳಿ ದಂಡ ಹಾಕಿ ಕಳಿಸಿದರು.