ಹುಬ್ಬಳ್ಳಿ: ಬ್ಯಾಂಕ್ ಲಾಕರ್ನಲ್ಲಿ ಭದ್ರವಾಗಿ ಇರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಆರೋಪಿಸಿದ ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೊಹ್ಲಿ ಎಂಬವರು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈಶ್ ಕೊಹ್ಲಿ ಕೇಶ್ವಾಪೂರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್ನ ಲಾಕರ್ನಲ್ಲಿ ಸುಮಾರು 56 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಲಾಕರ್ ಓಪನ್ ಮಾಡುವ ಕೀಲಿ ಈಶ್ ಅವರ ಕೈಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಕಳುವಾಗಿವೆ ಎಂದು ಅವರು ದೂರಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈಶ್ 2013ರಲ್ಲಿ ಕೇಶ್ವಾಪೂರ ಎಸ್‌ಬಿಐ ಬ್ಯಾಂಕ್‌ನಲ್ಲಿ ತಂದೆ-ತಾಯಿ ಹೆಸರಿನಲ್ಲಿ ಎರಡೂ ಲಾಕರ್‌ಗಳನ್ನು ತೆಗೆದುಕೊಂಡಿದ್ದರು. 2014ರಲ್ಲಿ ಈ ಲಾಕರ್ನಲ್ಲಿ ಚಿನ್ನಾಭರಣ ಮತ್ತು ದಾಖಲಾತಿಗಳನ್ನು ಇಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬ್ಯಾಂಕ್ ಲಾಕರ್‌ಗೆ ಶುಲ್ಕವನ್ನು ಕಟ್ಟುತ್ತಿದ್ದರು. ಕಳೆದ ಡಿಸೆಂಬರ್ 1ರಂದು ಬ್ಯಾಂಕ್ಗೆ ತೆರಳಿ ಲಾಕರ್ನಿಂದ ಚಿನ್ನಾಭರಣ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಬರಲು ಹೋದಾಗ ಒಂದು ಲಾಕರ್ ಓಪನ್ ಆಗಿದ್ದು, ಇನ್ನೊಂದು ಲಾಕರ್ ತೆರೆಯದೇ ಹಾಗೆಯೇ ಇರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾಂಕ್ ಎಜಿಎಂ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಬಿಐ ಬ್ಯಾಂಕ್ನ ಎಜಿಎಂ ದಿಲೀಪ್ ಕೆಂಬಾವಿ, ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದಿಲ್ಲ. ಕಳೆದ 10 ವರ್ಷಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದೆ. ನಾನು ಎರಡು ಮೂರು ತಿಂಗಳ ಹಿಂದೆಯಷ್ಟೇ ಈ ಕಚೇರಿಗೆ ಬಂದಿದ್ದೇನೆ. ಕಳೆದ ಹತ್ತು ವರ್ಷಗಳ ಹಿಂದೆ ದೂರುದಾರರ ತಂದೆ ಇಲ್ಲಿ ಲಾಕರ್ ಪಡೆದುಕೊಂಡಿದ್ದರು. ಈ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಬಳಿಕ ಏನು ನಡೆದಿದೆ ಎಂದು ತಿಳಿದುಬರುತ್ತದೆ ಎಂದು ತಿಳಿಸಿದರು.
ನಮ್ಮಲ್ಲಿ 500ರಿಂದ 600 ಲಾಕರ್ಗಳಿವೆ. ಲಾಕರ್ ಕೀ ವಾರಸುದಾರರ ಹತ್ತಿರ ಮಾತ್ರ ಇರುತ್ತದೆ. ಇನ್ನು, ಆರೋಪ ಮಾಡುತ್ತಿರುವವರ ತಂದೆ ತೀರಿ ಹೋಗಿದ್ದಾರೆ. ಅವರ ತಂದೆ ಹೆಸರಿನ ಲಾಕರ್ ಒಪನ್ ಆಗಿದ್ದರೆ, ಯಾರು ಓಪನ್ ಮಾಡಿದ್ದರು? ಹೇಗೆ ಮಾಡಿದರು ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂ ದರೋಡೆ ಯತ್ನ: ಬೆಂಕಿ ತಗುಲಿ 4 ಲಕ್ಷ ಮೌಲ್ಯದ ನೋಟು ಭಸ್ಮ