ಒಂದೆಡೆ ಬಿಸಿ ಬಿಸಿಯಾದ ಆಹಾರ. ಜೊತೆಗೆ ಊಟ ಬಡಿಸುತ್ತಿರುವ ಮಹಿಳೆಯರು. ಮತ್ತೊಂದೆಡೆ ರುಚಿಕರ ಊಟ ಪಡೆಯೋಕೆ ಸರತಿ ಸಾಲಲ್ಲಿ ನಿಂತಿರುವ ಜನರು. ಈ ದೃಶ್ಯ ಕಂಡು ಬರ್ತಿರೋದು ಹುಬ್ಬಳ್ಳಿಯ ಅಕ್ಕಿಹೊಂಡದ ಮಹಾವೀರ ಗಲ್ಲಿಯ ರೋಟಿಘರ್ ಮುಂಭಾಗದಲ್ಲಿ
ಈ ರೋಟಿಘರ್ಗೆ ಬರುವ ಜನರಿಗೆ ಕೇವಲ ಒಂದು ರೂಪಾಯಿಯಲ್ಲಿ ರುಚಿ ರುಚಿಯಾದ ಹಾಗೂ ಶುಚಿತ್ವದ ಊಟ ಇಲ್ಲಿ ಕೊಡಲಾಗುತ್ತದೆ. ಇಲ್ಲಿಗೆ ನಿತ್ಯ ಏನಿಲ್ಲ ಅಂದ್ರೂ 300 ರಿಂದ 400 ಜನ ಒಂದು ರೂಪಾಯಿ ಕೊಟ್ಟು ಊಟ ಮಾಡಿ ಹೋಗ್ತಾರೆ. ಅದ್ರಲ್ಲೂ ಗ್ರಾಮೀಣ ಭಾಗದಿಂದ ಹುಬ್ಬಳ್ಳಿ ನಗರಕ್ಕೆ ದುಡಿಯಲು ಬರುವ ಕಾರ್ಮಿಕರಿಗಾಗಿಯೇ ಈ ರೋಟಿಘರ್ ಆರಂಭಿಸಲಾಗಿದೆ. ನಿತ್ಯವೂ ಒಂದೊಂದು ಬಗೆಯ ಆಹಾರವನ್ನು ತಯಾರಿಸಿ, ಬಂದ ಜನರಿಗೆ ಪ್ರೀತಿಯಿಂದ ಇಲ್ಲಿ ಉಣ ಬಡಿಸಲಾಗುತ್ತದೆ. ಕಳೆದ ಒಂಬತ್ತು ವರ್ಷದಿಂದ ನಿತ್ಯ ನೂರಾರು ಜನರಿಗೆ ಕೇವಲ ಒಂದು ರೂಪಾಯಿಗೆ ಊಟ ಕೊಡುವ ವ್ಯವಸ್ಥೆ ಇಲ್ಲಿ ಮಾಡಲಾಗುತ್ತದೆ.
ಈ ರೋಟಿಘರ್ ಹುಟ್ಟಿಕೊಂಡಿದ್ದೇಕೆ...?
ಈ ರೋಟಿಘರ್ ಹುಟ್ಟಿಕೊಂಡಿದ್ದಕ್ಕೆ ಒಂದು ರೋಚಕ ಕಥೆ ಇದೆ. ಹುಬ್ಬಳ್ಳಿಯ ಜೈನ್ ಸಮುದಾಯದ ಯುವಕರು 1998ರಲ್ಲಿ ಮಹಾವೀರ್ ಯೂತ್ ಫೆಡರೇಷನ್ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ಆಗ ಜೈನ ಮುನಿಯೊಬ್ಬರು ಈ ಯುವಕರಿಗೆ ಹಸಿದವರಿಗೆ ಅನ್ನ ನೀಡುವಂತೆ ಸಲಹೆ ನೀಡಿದ್ದರಂತೆ. ಆ ಗುರುಗಳ ಆಶಯದಂತೆ ಜೈನ ಯುವಕರ ಸಂಘ 2009ರಲ್ಲಿ ಈ ರೋಟಿಘರ್ ಆರಂಭಿಸಿದೆ. ಅಂದಿನಿಂದ ಇಂದಿನ ವರೆಗೂ ನಿರಂತರವಾಗಿ ಈ ರೋಟಿಘರ್ನಲ್ಲಿ ಒಂದು ರೂಪಾಯಿಗೆ ಊಟ ನೀಡುವ ಕಾಯಕ ತಪ್ಪದೆ ಮಾಡಲಾಗುತ್ತಿದೆ.
ನಿತ್ಯ ಊಟ ತಯಾರಿಸಲು 7 ರಿಂದ 8 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಇಲ್ಲಿ ಒಂದು ಊಟಕ್ಕೆ ಪಡೆಯೋದು ಕೇವಲ ಒಂದು ರೂಪಾಯಿ ಮಾತ್ರ. ಒಂದು ರೂಪಾಯಿ ಅನ್ನೋದು ಇಲ್ಲಿ ಸ್ವಾಭಿಮಾನದ ಸಂಕೇತ. ಉಚಿತವಾಗಿ ಊಟ ಮಾಡೋಕೆ ಶ್ರಮಿಕರು ಹಿಂಜರಿಯುತ್ತಾರೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕೇವಲ ಒಂದು ರೂಪಾಯಿ ನಿಗದಿ ಮಾಡಲಾಗಿದೆ.
ಕಳೆದ ಒಂಭತ್ತು ವರ್ಷದಿಂದ ಯಾವುದೇ ಪ್ರಚಾರವಿಲ್ಲದೇ ಇಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿದೆ. ಬಡವರು, ಕೂಲಿ ಕಾರ್ಮಿಕರು ಸ್ವಾಭಿಮಾನದ ಸಂಕೇತವಾದ ರೋಟಿಘರ್ ಊಟಕ್ಕೆ ಭೇಷ್ ಅನ್ನುತ್ತಿದ್ದಾರೆ. ರುಚಿಯಾದ ಊಟ ನೀಡುವ ರೋಟಿಘರ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ರೂ. ಗೆ ಚಹಾ ಕೂಡ ಸಿಗದ ಕಾಲದಲ್ಲೂ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಜನ
ಸರ್ಕಾರ ಜನರ ತೆರಿಗೆಯಿಂದ ಜನಪರ ಯೋಜನೆ ರೂಪಿಸಲು ಹೆಣಗಾಡುತ್ತಿದೆ. ಆದರೆ, ಸರ್ಕಾರಿ ಯೋಜನೆಗೆ ಹೋಲಿಸಿದ್ರೆ, ಯಾವುದೇ ಪ್ರಚಾರವಿಲ್ಲದೇ ಒಂದು ರೂಪಾಯಿಗೆ ರುಚಿಕರ ಊಟ ನೀಡುತ್ತಿರುವ ಜೈನ್ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ.