ಧಾರವಾಡ : ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಧಾರವಾಡ ತಾಲೂಕಿನ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇತರ ನಾಲ್ವರಿಗೆ ಗಾಯಗಳಾಗಿದೆ.
ಕಾರಿನಲ್ಲಿದ್ದವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಔರಾದಿ ಗ್ರಾಮದವರು. ಅಗ್ನಿಪಥ್ಗೆ ನೇಮಕಗೊಂಡು ಸೇರ್ಪಡೆಯಾಗಲು ಹೊರಟಿದ್ದ ಸ್ನೇಹಿತನನ್ನು ಬೀಳ್ಕೊಡಲು ಹೊರಟಾಗ ಅವಘಡ ಸಂಭವಿಸಿದೆ. ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಪಕ್ಕದಲ್ಲಿ ಹೊರಟಿದ್ದ ಓರ್ವ ಪಾದಚಾರಿಗೂ ಗುದ್ದಿದೆ. ಇದರಿಂದ ತೀವ್ರ ಗಾಯಗೊಂಡ ಪಾದಚಾರಿಯೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಾಂತೇಶ್ ಮುದ್ದೋಜಿ (40), ಬಸವರಾಜ್ ನರಗುಂದ(35), ನಾಗಪ್ಪ ಮುದ್ದೋಜಿ(29, ಶ್ರೀಕುಮಾರ್ ಹಾಗೂ ಪಾದಚಾರಿ ಧಾರವಾಡ ಹೆಬ್ಬಳ್ಳಿಯ ಈರಣ್ಣಾ ರಾಮನಗೌಡರ್ (35) ತೀವ್ರ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಘಟನೆಯಲ್ಲಿ ಶ್ರವಣಕುಮಾರ್ ನರಗುಂದ, ಮಡಿವಾಳಪ್ಪ ಅಳ್ನಾವರ, ಪ್ರಕಾಶ್ ಗೌಡ ಹಾಗೂ ಮಂಜುನಾಥ ಮುದ್ದೋಜಿ ಎಂಬ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮಂಜುನಾಥ್ ಮುದ್ದೋಜಿ ಅಗ್ನಿಪಥ್ಗೆ ನೇಮಕಗೊಂಡಿದ್ದು, ಸೇರ್ಪಡೆಯಾಗಲು ಹೊರಟಿದ್ದ. ಆತನನ್ನು ಹುಬ್ಬಳ್ಳಿಗೆ ಬಿಟ್ಟು ಬರಲು ಬೆಳಗಾವಿಯಿಂದ ಸ್ನೇಹಿತರು ಹಾಗೂ ಸಂಬಂಧಿಕರು ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಮಂಜುನಾಥ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಲೋಕೇಶ್ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ, ಪರಿಶೀಲನೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ ದುಬೈನಲ್ಲಿ ರಾಯಚೂರಿನ ಒಂದೇ ಕುಟುಂಬದ ನಾಲ್ವರ ಸಾವು