ಹುಬ್ಬಳ್ಳಿ: ನವಲಗುಂದ ತಾಲೂಕಿನ ಅಮರಗೊಳ ಗ್ರಾಮದಲ್ಲಿ ನಡೆಯಬೇಕಿದ್ದ ಜಾತ್ರೆ ಕೊರೊನಾ ಮಹಾಮಾರಿಯಿಂದ ರದ್ದಾಗಿದೆ. ಪ್ರತಿವರ್ಷ ಈ ಊರಿನಲ್ಲಿ ಜಾತ್ರೆ ಬಂತು ಅಂದ್ರೆ ಊರಿನಲ್ಲಿ ಸಡಗರವೇ ತುಂಬಿರುತಿತ್ತು.
ಈ ವರ್ಷ ಜಾತ್ರೆಗೆಂದು ಯಾರಾದರೂ ಬಂದರೆ 500ರೂ. ಅಥವಾ ಊರಿನವರು ಸಂಬಂಧಿಕರನ್ನು ಕರೆಸಿದರೆ 1000 ರೂ. ದಂಡ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ.
ಗ್ರಾಮ ಪಂಚಾಯತ್ ಸಿಬ್ಬಂದಿ ಕೂಡಾ ಯಾರೂ ಬರಬೇಡಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಬೆಳವಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಅಮರಗೋಳ, ಗೊಬ್ಬರ ಗುಂಪಿ, ಬೆಳವಟಗಿ ಗ್ರಾಮದ ಜೊತೆಗೆ ಸುತ್ತಮುತ್ತಲಿನ ಊರುಗಳಲ್ಲೂ ಕೂಡಾ ಈ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದಾರೆ.
ಈ ಊರಿನ ಜಾತ್ರೆಯು ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿತ್ತು. ಜಾತ್ರೆಯಲ್ಲಿ ದೇವರ ದರ್ಶನ ಪಡೆಯಲು ಜಾತ್ರೆಗೆ ಬೇರೆ ಬೇರೆ ರಾಜ್ಯದ, ಜಿಲ್ಲೆಗಳ ಭಕ್ತರು ಆಗಮಿಸುತ್ತಿದ್ದರು. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ನೀಡಿದ ನಿರ್ದೇಶನದ ಮೇರೆಗೆ, ಜಾತ್ರೆಯನ್ನು ರದ್ದು ಮಾಡಲಾಗಿದೆ ಎಮದು ಗ್ರಾಮಸ್ಥರು ತಿಳಿಸಿದ್ದಾರೆ.
ಕೊರೊನಾದಿಂದ ತಮ್ಮ ಗ್ರಾಮದ ಜನತೆಯನ್ನು ರಕ್ಷಿಸಿಕೊಳ್ಳಲು ಈ ರೀತಿ ಕ್ರಮ ಕೈಗೊಳ್ಳಲು ಮುಂದಾದ ಇಲ್ಲಿನ ಜನರು ಹಾಗೂ ಪಂಚಾಯತ್ ಅಧಿಕಾರಿಗಳ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ.