ಹುಬ್ಬಳ್ಳಿ: ನಿಮ್ಮ ಮನೆಯ ಮುಂದೆ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟು ಮಾಡಿದರೆ ದಂಡ ತೆರಬೇಕಾದಿತು.
ಅವಳಿನಗರ ಹುಬ್ಬಳ್ಳಿ- ಧಾರವಾಡ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಂತೆ ವೈಯಕ್ತಿಕವಾಗಿ ವಾಹನ ಹೊಂದುವವರ ಸಂಖ್ಯೆಯೂ ಹೆಚ್ಚಾಗಿದ್ದು, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಜನರು ತಮ್ಮ ಮನೆ ಮುಂದೆ ಪಾರ್ಕಿಂಗ್ ಜಾಗವನ್ನು ಮೀಸಲಿಡದೆ, ಸಾರ್ವಜನಿಕ ರಸ್ತೆಯಲ್ಲಿ ಅಥವಾ ಮನೆಯ ಪಕ್ಕದಲ್ಲಿ ಬೈಕ್, ಕಾರುಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಹೀಗೆ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಲು ಮುಂದಾಗಿದೆ.
ಇನ್ನು ಮುಂದೆ ಅವಳಿ ನಗರದ ಮನೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ಥಳವಿಲ್ಲ ಅಂತಾ ಮನೆ ಕಾಂಪೌಂಡ್ ಮುಂದೆ, ರಸ್ತೆ ಪಕ್ಕದಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ, ದಂಡ ವಸೂಲಿ ಮಾಡಲು ಪಾಲಿಕೆ ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಕೋವಿಡ್ನಿಂದ ತತ್ತರಿಸಿ ಹೋಗಿರುವ ಜನರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಈ ನಡುವೆ ಮನೆ ಕರ, ನೀರಿನ ಕರ ಕಟ್ಟಲಾಗದೇ ಒದ್ದಾಡುತ್ತಿರುವಾಗಲೇ ಈ ರೀತಿ ದಂಡ ವಸೂಲಿ ಮಾಡಲು ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದಿನಕ್ಕೆ ಒಂದು ವಾಹನಕ್ಕೆ ಹತ್ತು ರೂಪಾಯಿ ಪಾರ್ಕಿಂಗ್ ದಂಡ ವಸೂಲಿ ಮಾಡಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಆದರೆ, ಅವಳಿ ನಗರದ ಜನರು ಮಾತ್ರ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ಗೆ ನಿನ್ನೆ ಒಂದೇ ದಿನ 137 ಮಂದಿ ಬಲಿ: ಸುಮನಹಳ್ಳಿ ಚಿತಾಗಾರದ ಬಳಿ ಆ್ಯಂಬುಲೆನ್ಸ್ ಕ್ಯೂ
ಬೆಂಗಳೂರು ಬಳಿಕ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ ಮಹಾನಗರ ಪಾಲಿಕೆ ಮನೆ ಮುಂದೆ, ರಸ್ತೆ ಪಕ್ಕದಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ವಸೂಲಿ ಮಾಡಲು ಮುಂದಾಗುವ ಮೂಲಕ, ಸಾರ್ವಜನಿಕ ಸಂಚಾರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಇದರಿಂದ ಮನೆಯ ಮುಂದೆ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವವರಿಗೆ ಬಿಗ್ ಶಾಕ್ ನೀಡಿದೆ.