ಹುಬ್ಬಳ್ಳಿ: ಕನ್ನಡ ನಾಡು-ನುಡಿಗಾಗಿ ಹೋರಾಡಿದ ಪಾಪು ಅವರನ್ನು ಕಳೆದುಕೊಂಡ ನಮಗೆಲ್ಲ ತೀವ್ರ ನೋವುಂಟಾಗಿದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಭಾವುಕರಾದರು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ನಂತರ ಮಾತನಾಡಿದ ಅವರು, ದೇಶದ ಎಲ್ಲ ಸ್ತರಗಳ ಚಿಂತನೆಯಲ್ಲಿ ಸಕ್ರಿಯವಾಗಿದ್ದ ಹೋರಾಟಗಾರ ಪುಟ್ಟಪ್ಪ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದವರು. ಹಿಂದೊಮ್ಮೆ ಉತ್ತರ ಕರ್ನಾಟಕ ಬೇರೆ ರಾಜ್ಯವಾಗಬೇಕು ಎಂದು ಹೇಳಿಕೆ ನೀಡಿದ್ದೆ. ಆಗ, ಮನೆಗೆ ಕರೆಸಿ ನಿನೋಬ್ಬ ಪ್ರಬುದ್ಧ ರಾಜಕಾರಣಿ ಎಂದುಕೊಂಡಿದ್ದೇ, ಅದು ಸುಳ್ಳಾಯಿತು. ಈಗಲೇ ದೇವೇಗೌಡರ ಬಳಿ ಚರ್ಚಿಸಿ, ಹೇಳಿಕೆ ಹಿಂಪಡೆಯುವಂತೆ ಮಾಡಿದ್ದರು ಎಂದು ಹಳೇ ಘಟನೆಗಳನ್ನು ನೆನಪಿಸಿಕೊಂಡರು.
ನಾಡಿನ ನೆಲ-ಜಲ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅವರ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ. ನಮ್ಮ ಜೊತೆ ಇಲ್ಲದೇ ಇರುವುದು ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.