ಗದಗ/ಧಾರವಾಡ: ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತ ಚಿಕ್ಕ ನರಗುಂದದ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಸಚಿವ ಸಿ.ಸಿ.ಪಾಟೀಲ್ ಮತ್ತು ಬೆಂಬಲಿಗರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.
ಆದರೆ, ಸಚಿವರು ಚಪ್ಪಲಿ ಬಿಟ್ಟು ನಮನ ಸಲ್ಲಿಸಿದರೆ, ಗದಗ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಅವರು ಚಪ್ಪಲಿ ಹಾಕಿಕೊಂಡೇ ನಮನ ಸಲ್ಲಿಸಿದರು. ಇದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಚಪ್ಪಲಿ ಧರಿಸಿಯೇ ಗೌರವ ಸಲ್ಲಿಸಿ, ರೈತರಿಗೆ ಅಪಮಾನ ಮಾಡಿದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![today-is-farmers-martyrs-day](https://etvbharatimages.akamaized.net/etvbharat/prod-images/kn-gdg-03-namana1-7203292_21072020122024_2107f_1595314224_1081.jpg)
ಧಾರವಾಡ ವರದಿ: ಜಿಲ್ಲಾಡಳಿತ ಸಾರ್ವಜನಿಕ ಆಚರಣೆಗೆ ನಿರ್ಬಂಧವಿದ್ದು 40ನೇ ರೈತ ಹುತಾತ್ಮ ದಿನವನ್ನು ಧಾರವಾಡದ ನವಲಗುಂದದಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿದೆ. ಕೇವಲ ಐದೈದು ಜನ ಮಾತ್ರ ತೆರಳಿ ಹುತಾತ್ಮ ರೈತರ ಸ್ಮಾರಕಕ್ಕೆ ಗೌರವ ಸೂಚಿಸಿದರು.
ನವಲಗುಂದ ರೈತ ಭವನ ಬದಿಯ ರೈತ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಕೆ ಸಲ್ಲಿಸಲಾಗುತ್ತಿದ್ದು, ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿ ವಿವಿಧ ರೈತ ಮುಖಂಡರು ಭಾಗಿಯಾಗಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಹುತಾತ್ಮ ಸ್ಮಾರಕದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಆಚರಣೆ ಹಿಂದಿನ ಉದ್ದೇಶ:
ರೈತರ ಜಮೀನುಗಳಿಗೆ ನೀರು ಹರಿಸದೆ ಕರ ಸಂಗ್ರಹಿಸಲು ಮುಂದಾದ ಸರ್ಕಾರದ ವಿರುದ್ಧ 40 ವರ್ಷಗಳ (ಜು.21, 1981) ಹಿಂದೆ ಸೆಡ್ಡು ಹೊಡೆದು ಪೊಲೀಸರ ಗುಂಡಿಗೆ ಎದೆಕೊಟ್ಟು ಪ್ರಾಣತ್ಯಾಗ ಮಾಡಿದ ರೈತರು, ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಂತಹ ದಿನವೇ ರೈತ ಹುತಾತ್ಮ ದಿನ.