ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದಿಂದ ಕೋವಿಡ್ ಹೆಚ್ಚಾಗಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕೊರೊನಾ ನಿಯಂತ್ರಣ ಮಾಡಿದ್ದೇವೆ, ವಿಶ್ವದಲ್ಲಿ ನಾನೇ ದೊಡ್ಡ ನಾಯಕ ಎಂದು ಪ್ರಧಾನಿ ತುಂಬಾ ಹೆಮ್ಮೆಯಿಂದ ಹೇಳಿದ್ದರು. ಕೇಂದ್ರ ಸರ್ಕಾರದ ಈ ಅಹಂಕಾರ ಮನೋಭಾವ ಮತ್ತು ದೂರದೃಷ್ಟಿಯ ಕೊರತೆಯೇ ದೇಶದಲ್ಲಿ ಸೋಂಕು ಉಲ್ಬಣಕ್ಕೆ ಕಾರಣ ಎಂದರು.
ವೈದ್ಯರು ಮತ್ತು ನರ್ಸ್ಗಳ ಕೊರತೆ ಹೆಚ್ಚಿದೆ. ಮುಂದೆ ಕೋವಿಡ್ 3ನೇ ಅಲೆ ಬಂದರೆ 10 ಲಕ್ಷ ಜನ ಸೋಂಕಿತರಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವುದು ಬಿಟ್ಟು ರಾಮನ ಮೂರ್ತಿ, ಪಟೇಲ್ ಪ್ರತಿಮೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಅದೇ ಹಣ ವ್ಯಯಿಸಿದ್ದರೆ ಕೊರೊನಾ ನಿಯಂತ್ರಿಸಬಹುದಿತ್ತು ಎಂದು ಹೇಳಿದರು.
ನ್ಯಾಯಾಲಯಗಳು ಕೋವಿಡ್ ನಿಯಂತ್ರಣ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿವೆ. ಕೋವಿಡ್ ನಿಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದು ಕಿಡಿಕಾರಿದರು.
ಓದಿ : ಕೋವಿಡ್ ನಿಯಂತ್ರಿಸುವಲ್ಲಿ ವಿಫಲ: ವಿಜಯಪುರ ಡಿಹೆಚ್ಒಗೆ ಕಡ್ಡಾಯ ರಜೆ
ಸಚಿವ ಸುಧಾಕರ್ ಭ್ರಷ್ಟಾಚಾರ ಮಾಡಲು ಸಿಎಂಗೆ ಸಹಾಯ ಮಾಡುತ್ತಾರೆ ಎನ್ನುವ ಕಾರಣಕ್ಕೆ ಶ್ರೀರಾಮುಲು ಅವರಿಂದ ಆರೋಗ್ಯ ಇಲಾಖೆ ಕಿತ್ತುಕೊಂಡು ಸುಧಾಕರ್ಗೆ ನೀಡಲಾಗಿದೆ. ಸುಧಾಕರ್ ಎಂದೂ ಡಾಕ್ಟರ್ ವೃತ್ತಿ ಮಾಡಿಲ್ಲ. ಕೇವಲ ರಿಯಲ್ ಎಸ್ಟೇಟ್ ದಂಧೆ ಮಾಡಿದವರು. ಕೊರೊನಾ ಕಿಟ್ ಖರೀದಿಯಲ್ಲಿ 2,200 ಕೋಟಿ ರೂ. ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.