ಹುಬ್ಬಳ್ಳಿ: ನಿಷ್ಕ್ರಿಯವಾಗಿರುವ 104 ಆರೋಗ್ಯವಾಣಿಯನ್ನು ಶೀಘ್ರ ಪುನಾರಂಭಿಸುವುದು ಮತ್ತೆ ಹಳೆಯ ಸಿಬ್ಬಂದಿಯ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು 104 ಆರೋಗ್ಯ ವಾಣಿ ಸಿಬ್ಬಂದಿ ಒತ್ತಾಯಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬೆರಳ ತುದಿಯಲ್ಲಿ ಆರೋಗ್ಯ ಸೇವೆ ದೊರೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಾರಂಭವಾದ 104 ಆರೋಗ್ಯ ವಾಣಿ ಇದೀಗ ದಯನೀಯ ಸ್ಥಿತಿ ತಲುಪುವಂತಾಗಿದೆ. ಕಳೆದೆರಡು ತಿಂಗಳಿಂದ ಆರೋಗ್ಯವಾಣಿ ನಿಷ್ಕ್ರಿಯಗೊಂಡಿದೆ.
ಪರಿಣಾಮ ಪಿರಾಮಲ್ ಸ್ವಾಸ್ಥ್ಯ ಕಂಪನಿ 2022 ಫೆ.15ರಂದು ಗುತ್ತಿಗೆಯಿಂದ ಹೊರ ಬಂದಿದೆ. ಇದರಿಂದ ಆರೋಗ್ಯವಾಣಿಯ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿಯ ಭವಿಷ್ಯ ಅಡಕತ್ತರಿಗೆ ಸಿಲುಕಿದೆ. ಹುಬ್ಬಳ್ಳಿ, ಬೆಂಗಳೂರು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ಎದುರಾಗಿದೆ.
ಇದಲ್ಲದೇ ಪಿರಾಮಲ್ ಸ್ವಾಸ್ಥ್ಯ ಕಂಪನಿ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದದಂತೆ ಸಿಬ್ಬಂದಿ ವರ್ಗದವರಿಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಸರ್ಕಾರ ಅನುದಾನ ನೀಡಿಲ್ಲ ಎಂದು ನೆಪವೊಡ್ಡಿ ವಂಚನೆ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಇದರ ಫಲವಾಗಿ ಸರ್ಕಾರ ಕಂಪನಿಯ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಸಿತು. ಆಗ ಕಂಪನಿಯು ಬಾಕಿ ಇರುವ ವೇತನವನ್ನು ಹೊರತುಪಡಿಸಿ ಉಳಿದ ಯಾವುದೇ ಸವಲತ್ತುಗಳನ್ನು ನೀಡಲು ನಿರಾಕರಿಸಿದೆ. ಇದು ಸಿಬ್ಬಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರಣದಿಂದ ಮತ್ತೊಮ್ಮೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತಹಬದಿಗೆ ಬಾರದ ವಿಧಾನಸಭೆ ಕಲಾಪ ; ಸದನವನ್ನು ಸೋಮವಾರಕ್ಕೆ ಮುಂದೂಡಿದ ಸ್ಪೀಕರ್