ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ 2030ರೊಳಗೆ ದೇಶದ ರೈಲ್ವೆಗಳೆಲ್ಲವನ್ನು ಪರಿಸರ ಸ್ನೇಹಿಯಾಗಿ ಮಾಡಲು ನಿರ್ಧರಿಸಿದೆ.
ವಿದ್ಯುದ್ದೀಕರಣಗೊಳಿಸಿ 'ಗ್ರೀನ್ ರೈಲ್ವೆ' ಮಾಡುವ ಉದ್ದೇಶ ಹೊಂದಿರುವ ಭಾರತೀಯ ರೈಲ್ವೆ ಇಲಾಖೆಯ ಧ್ಯೇೆಯದಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ವಿದ್ಯುದ್ದೀಕರಣ ಕಾಮಗಾರಿಯನ್ನು ಭರದಿಂದ ಕೈಗೆತ್ತಿಕೊಂಡಿದ್ದು, ಈಗಾಗಲೇ 1248.60 ಕಿ.ಮೀ. ಪೂರ್ಣಗೊಳಿಸಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಲ್ಲೂ ವಿದ್ಯುದ್ದೀಕರಣ ಕಾಮಗಾರಿಗಳು ನಡೆದಿವೆ.
ಬೆಂಗಳೂರಿನ 1144 ಆರ್‌ಕೆಎಂ (ಕಿಲೋ ಮೀಟರ್) ಪೈಕಿ ಈವರೆಗೆ 688 ಆರ್‌ಕೆಎಂ ಪೂರ್ಣಗೊಂಡಿದೆ. ಹುಬ್ಬಳ್ಳಿ ವಿಭಾಗದ 1328 ಆರ್‌ಕೆಎಂ ಪೈಕಿ ಈವರೆಗೆ 426,69 ಆರ್‌ಕೆಎಂ ಪೂರ್ಣಗೊಂಡಿದ್ದರೆ, ಮೈಸೂರು ವಿಭಾಗದ 1132 ಆರ್‌ಎಂ ಪೈಕಿ 134.1 ಆರ್‌ಕೆಎಂ ಪೂರ್ಣಗೊಂಡಿದೆ. ಈ ಮೂಲಕ 3604 ಆರ್‌ಕೆಎಂ ಪೈಕಿ ಈವರೆಗೆ 1248.69 ಕಿಲೋ ಮೀಟರ್ ವಿದ್ಯುದ್ದೀಕರಣ ಪೂರ್ಣಗೊಂಡಿದೆ. 2024ರ ಹೊತ್ತಿಗೆ ಬಾಕಿ ಉಳಿದ ಕಾಮಗಾರಿ ಮುಗಿಯಲಿದೆ.
ಹುಟಗಿ- ವಿಜಯಪುರ ಮಾರ್ಗದಲ್ಲಿ ವಿದ್ಯುತ್ ಎಂಜಿನ್ ಬಳಸಿ ಪ್ರಾಯೋಗಿಕ ಸಂಚಾರ ಕೂಡ ಮಾಡಲಾಗಿದೆ. ಶೀಘ್ರದಲ್ಲೇ ಅಲ್ಪಾವರ- ಲೋಂಡಾ ಮಧ್ಯೆ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಇನ್ನೂ ಕೆಲವೆಡೆ ವಿದ್ಯುತ್ ಎಂಜಿನ್ ಬಳಸಿ ಪ್ರಾಯೋಗಿಕ ಸಂಚಾರ ಕೂಡ ಮಾಡಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಹೂಟಗಿ- ವಿಜಯಪುರ ಮಧ್ಯೆ ವಿದ್ಯುತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಅದು ಯಶಸ್ವಿ ಕೂಡ ಆಗಿದೆ.
ಇದೀಗ ಹುಬ್ಬಳ್ಳಿ ವಿಭಾಗದ ಅಳ್ಳಾವರ- ಲೋಂಡಾ ಮಧ್ಯೆ ಪ್ರಾಯೋಗಿಕ ಸಂಚಾರ ನಡೆಸಲು ವಲಯ ನಿರ್ಧರಿಸಿದೆ. ವಿದ್ಯುತ್ ರೈಲುಗಳ ಸಂಚರಿಸಿದರೆ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಪರಿಸರ ರಕ್ಷಣೆಯೂ ಆಗುತ್ತದೆ. ಒಂದು ವಿದ್ಯುತ್ ಎಂಜಿನ್‌ನಿಂದ ವರ್ಷಕ್ಕೆ 18 ಟನ್ ಕಾರ್ಬನ್ ಫುಟ್‌ಪ್ರಿಂಟ್ ಕಡಿಮೆ ಆಗುತ್ತದೆ. ರೈಲುಗಳ ಸ್ಪೀಡ್ ಹೆಚ್ಚಾಗುತ್ತದೆ. ಪ್ರಯಾಣದ ಸಮಯದ ಉಳಿತಾಯ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: ಬೆಂಗಳೂರು: ಉಪನಗರ ರೈಲು ಯೋಜನೆಗೆ 450 ಕೋಟಿ ರೂ. ಲಭ್ಯ